ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಮನಾಥಪುರ ಮಾರುಕಟ್ಟೆಯಲ್ಲಿ ರು. 1.25 ಕೋಟಿ ಹೊಗೆಸೊಪ್ಪು ಮಾರಾಟ

Rashmi Kasaragodu
Updated On : 9 Mar 2013, 11:31 am

ಕ.ಪ್ರ.ವಾರ್ತೆ  ರಾಮನಾಥಪುರ  ಮಾ.9
ಇಲ್ಲಿಯ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಮಾರುಕಟ್ಟೆಯ ಪ್ಲಾಟ್‌ಫಾರಂ 7 ಹಾಗೂ 63 ಹರಾಜು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 7 ರಿಂದ ಮಾ.6ರ ವರೆಗೆ 1.25 ಕೋಟಿ ರು. ಹೊಗೆಸೊಪ್ಪು ಮಾರಾಟವಾಗಿದೆ. ಪ್ರತಿ ಕೆ.ಜಿ. ತಂಬಾಕಿಗೆ 117.60 ರು ಸರಾಸರಿ ಬೆಲೆ ಸಿಗುತ್ತಿದೆ.
ಪ್ರತಿದಿನ ತಲಾ ಬೇಲ್ 50 ರಿಂದ 150 ಕೆ.ಜಿ. ಒಳಗೊಂಡ ಒಂದು ಬೇಲ್ ಪ್ರಕಾರ ಎರಡು ಹರಾಜು ಕಟ್ಟೆಗಳಿಂದ 1500 ರಿಂದ 1800ಕ್ಕೂ ಹೆಚ್ಚು ಬೇಲ್ ತಂಬಾಕು ಮಾರುಕಟ್ಟೆಗೆ ಬರುತ್ತಿದೆ. ಕನಿಷ್ಠ ದರ್ಜೆಯ ತಂಬಾಕಿಗೆ 70 ರು. ನಿಂದ ಪ್ರಾರಂಭವಾಗಿ ಗರಿಷ್ಠ 117.60 ರು ಸಿಗುತ್ತಿದೆ.
ಅನ್ಯಾಯ: ಕೆಲವೇ ಕೆಲವು ಉತ್ತಮ ತಂಬಾಕಿಗೆ 120 ರಿಂದ 152.60 ಪೈಸೆ ಮಾತ್ರ ಬೆಲೆ ನೀಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದ ರೈತರು ಕರ್ನಾಟಕದ ವಾಣಿಜ್ಯ ಬೆಳೆ ತಂಬಾಕಿಗೆ ಕನಿಷ್ಠ 120 ರು. ನಿಂದ ಗರಿಷ್ಠ 180 ರು. ನೀಡಬೇಕು ಹಾಗೂ ಪ್ರತಿ ಕೆ.ಜಿ. ತಂಬಾಕಿಗೆ ಸರಾಸರಿ 170 ರು., ತಂಬಾಕು ಸೊಪ್ಪಿಗೆ ಬೆಲೆ ನಿಗದಿ ಮಾಡಬೇಕು ಎಂದು ಅಗ್ರಹಿಸಿದ್ದಾರೆ.
ತಂಬಾಕು ಬೆಳೆ ನಿಷೇಧ:  ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2020ಕ್ಕೆ ಹಂತ ಹಂತವಾಗಿ ತಂಬಾಕು ಬೆಳೆ ನಿಷೇಧ  ಮಾಡುತ್ತೇವೆ ಎನ್ನುವ ಕೇಂದ್ರ ತಂಬಾಕು ಮಂಡಳಿ, ರೈತರಿಗೆ ಬೇರೆ ಪರ್ಯಾಯ ಮಾರ್ಗ ಸೂಚಿಸದೇ ಅವರನ್ನು ಇಕ್ಕಟಿಗೆ ಸಿಲುಕಿಸಿದೆ.
ಕರ್ನಾಟಕ ಹಾಗೂ ಆಂಧ್ರ ರೈತರ ಮಧ್ಯ ಬೆಲೆಯಲ್ಲಿ ತಾರತ್ಯಮ ನಡೆಯುತ್ತಿದೆ. ಇದರ ಹಿಂದಿನ ಒಳಮರ್ಮವೇನು ಹಾಲಿ ಇರುವ ಲೈಸನ್ಸ್‌ದಾರರಿಗೆ ಬೆಲೆಯನ್ನು ಕಡಿಮೆ ನೀಡುತ್ತಾರೆ. ಮತ್ತೆ ಹೊಸದಾಗಿ ಬೆಳೆಗಾರರಿಗೆ ಕಾರ್ಡ್ ಕೊಟ್ಟು ತಂಬಾಕು ಕೊಳ್ಳುತ್ತಾರೆ. ಹಾಗೂ ಹೆಚ್ಚುವರಿ ತಂಬಾಕು ಹರಾಜು ಮಾರುಕಟ್ಟೆ ಮಾಡುತ್ತೇವೆ ಎನ್ನುತಾರೆ. ಇದರ ಗುಟ್ಟೇನು ಎಂಬುದು ತಿಳಿಯುತ್ತಿಲ್ಲ ಎನ್ನುತಾರೆ ರೈತರು.
ಅನಧಿಕೃತ ಬೆಳೆಗಾರರು: ನೋಡಿ ಸಾರ್ ಅನಧಿಕೃತ ತಂಬಾಕು ಬೆಳೆಗಾರರು ಜಾಸ್ತಿಯಗಿದ್ದಾರೆ. ರಾಜ್ಯದಲ್ಲಿ ಅಧಿಕೃತವಾಗಿ 25 ಸಾವಿರ  ಹೆಕ್ಟೇರ್‌ಗಳಲ್ಲಿ ತಂಬಾಕು ಬೆಳೆ ಬೆಳೆಯಲಾಗಿದೆ. ಇತ್ತೀಚೆಗೆ ಕೂಲಿ ಆಳುಗಳ ಕೊರತೆ, ಸೌದೆ ಸಮಸ್ಯೆ, ಸಾಗಾಣಿಕೆ ವೆಚ್ಚ ಎಲ್ಲವೂ ದುಬಾರಿಯಾಗಿದೆ. ನಾವು ಸುಮಾರು 100 ಎಕರೆಯಲ್ಲಿ ಸರಾಸರಿ 70 ರಿಂದ 80 ಸಾವಿರ ಕೆ.ಜಿ. ತಂಬಾಕು ಉತ್ಪಾದಿಸುತ್ತೇವೆ. 1 ಕೆಜಿಗೆ 130 ರಿಂದ 140  ರು. ವೆಚ್ಚವಾಗುತ್ತದೆ ಎಂದು ರೈತರು ಹೇಳುತ್ತಾರೆ.
ಅಂಧ್ರದಿಂದ ಕುಶಲಿ ಆಳುಗಳು: ಈ ಬೆಳೆ ಸುಲಭವಾಗಿ ಬೆಳೆಯಲು ಸಾಧ್ಯವಿಲ್ಲ. ನಮಗೆ 30ರಿಂದ 40 ಕೂಲಿ ಕಾರ್ಮಿಕರು ಬೇಕು. ಹೆಣ್ಣಾಳಿಗೆ 200 ರು. ಮತ್ತು ಗಂಡಾಳಿಗೆ 300 ರು.  ಸ್ಥಳೀಯವಾಗಿ ಆಳುಗಳ ಕೊರತೆ ಇರುವುದರಿಂದ ಆಂಧ್ರದಿಂದ ಕುಶಲಿ ಕೂಲಿಯಾಳುಗಳು ಬರುತ್ತಾರೆ.
ನಿಗದಿತ ಅವಧಿಗೆ ಕೆಲಸ ಮುಗಿಸಿ ತೆರಳುತ್ತಾರೆ. ತಂಬಾಕು ಬೆಳೆಗೆ 4 ಕ್ವಿಂಟಾಲ್ ಪ್ಯೊಟ್ಯಾಶ್ ಗೊಬ್ಬರ ಬೇಕು. 1 ಲಾರಿ ಸೌದೆ ಬೇಕು. 90 ಡಿಗ್ರಿಯಿಂದ 160 ಡಿಗ್ರಿ ಸೆಲಿಷಿಯಸ್ ವರೆಗೆ ಹಂತ ಹಂತವಾಗಿ ಸೊಪ್ಪು ಬೇಯಿಸಬೇಕು. 20 ಬ್ಯಾರನ್ ಮನೆಯಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಸೊಪ್ಪಿನ ಗುಣಮಟ್ಟ ಹಾಳಾಗುತ್ತದೆ. ಸೌದೆ ನಮ್ಮಲ್ಲಿ ಸಿಗುತ್ತಿಲ್ಲ. ಪಕ್ಕದ ತಿಪಟೂರು ಮುಂತಾದ ಕಡೆಗಳಿಂದ ಸೌದೆ ತರಿಸುತ್ತೇವೆ. ತಂಬಾಕು ಬೆಳೆಯಲು ಮಂಡಳಿಯಿಂದ ಸರಿಯಾಗಿ ಸಹಕಾರ ಸಿಗೋಲ್ಲ. ಕೆಲವು ತಂಬಾಕು ಕೊಳ್ಳುವ ಕಂಪನಿಯವರು ಎಲ್ಲ ಹಂತದಲ್ಲೂ ಉತ್ತಮ ಮಾರ್ಗದರ್ಶನ ನೀಡಿ ಕಾಳಜಿ ವಹಿಸುತ್ತಾರೆ. ಹಾಗಾಗಿ ನಮ್ಮದು ಹೇಗೋ ಸಾಗಿದೆ. ಆದರೆ ಬಡ ರೈತನ ಕಥೆ ಏನು ಎಂದು ಪ್ರಶ್ನಿಸುವ ರೈತ ಚಂದ್ರಪ್ಪ, ರೈತರ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸುತ್ತಾರೆ.
ರಾಜ್ಯದಲ್ಲಿ ಕೆಲವು ಕಡೆ ಮಾತ್ರ:  ಕರ್ನಾಟಕದಲ್ಲಿ ತಂಬಾಕು ಬೆಳೆಯೋದು ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಯ  ಅರಕಲಗೂಡು, ಹೋಳೆನರಸಿಪುರ, ಸೋಮವಾರಪೇಟೆ, ಕೆ.ಅರ್. ನಗರ ಪಿರಿಯಪಟ್ಟಣ, ಹುಣಸೂರು, ಎಚ್.ಡಿ. ಕೋಟೆ ಮುಂತಾದ ತಾಲೂಕುಗಳಲ್ಲಿ ಮಾತ್ರ ತಂಬಾಕು ಬೆಳೆಯುತ್ತಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement