'ಸಂಸ್ಕೃತಿ, ಸಂಪ್ರದಾಯ ಇಂದಿಗೂ ಜೀವಂತ'
ಕ.ಪ್ರ.ವಾರ್ತ್ಣೆ ಹೊಳೆನರಸೀಪುರ ಮಾ.9
ಸಂಸ್ಕೃತಿ ಮತ್ತು ಸಂಪ್ರದಾಯಗಳು ನಮ್ಮ ಸಮಾಜದಲ್ಲಿ ಇಂದಿಗೂ ಜೀವಂತವಾಗಿವೆ ಎಂದರೆ ಅದಕ್ಕೆ ನಮ್ಮ ಮಹಿಳೆಯರು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿರುವುದರಿಂದ ಮಾತ್ರವೇ ಸಾಧ್ಯವಾಗಿದೆ ಎಂದು ತಾಲೂಕಿನ ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಎಂ.ಎಸ್.ಮಂಜುನಾಥ್ ಅಭಿಪ್ರಾಯಪಟ್ಟರು.
ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಪ್ರಸ್ತುತ ತಮ್ಮ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಮಹಿಳೆಯರು ತಾವು ಅಬಲೆಯರು ಎಂಬ ಮನಸ್ಥಿತಿಯನ್ನು ತೊರೆದು ಸಬಲರಾಗಿ ಸದುಪಯೋಗ ಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶಿವರಾಜು ಮಾತನಾಡಿ, ಭಾರತವು ನಾನಾ ಧರ್ಮ, ಭಾಷೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರಪಂಚದಲ್ಲಿಯೇ ಭಾರತ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದರು.
ಪ್ರತಿಯೊಂದು ಧರ್ಮವೂ ವಿಶಿಷ್ಟ ಉಡುಗೆ ತೊಡುಗೆಗಳನ್ನು ಧರಿಸುವ ಸಂಪ್ರದಾಯ ಹೊಂದಿದ್ದು, ಬೇರೆಲ್ಲೂ ಕಂಡುಬರದ ವೈವಿಧ್ಯತೆಯನ್ನು ನಮ್ಮ ರಾಷ್ಟ್ರ ಹೊಂದಿ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವಾಗಿದೆ. ಇಂಥ ಭವ್ಯ ಸಂಪ್ರದಾಯ, ಸಂಸ್ಕೃತಿ ಉಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತಿಹಾಸ ವಿಭಾಗ ಪ್ರಾಧ್ಯಾಪಕ ಎಚ್.ಜೆ.ಬೋರಯ್ಯ ಮಾತನಾಡಿ, ಸ್ತ್ರೀಯರು ಅವಕಾಶಗಳಿಗಾಗಿ ಕಾಯುತ್ತಾ ಕೂರದೆ, ಸ್ವಂತ ಶಕ್ತಿಯಿಂದಲೇ ಅವಕಾಶಗಳನ್ನು ಪಡೆದು ಕೊಳ್ಳುವಂತಾಗಬೇಕು ಎಂದು ಹೇಳಿದ ಅವರು, ಸ್ವಂತ ಶಕ್ತಿ ಹಾಗೂ ಸ್ವಾವಲಂಬನೆಯಿಂದಲೇ ಮಹಿಳೆಯರು ಸಾಕಷ್ಟು ಇತಿಹಾಸ ಸೃಷ್ಟಿಸಿದ ಉದಾಹರಣೆಗಳು ಕಂಡುಬರುತ್ತವೆ ಎಂದು ನುಡಿದರು. ಕಾಲೇಜಿನ ಪ್ರಾಧ್ಯಾಪಕರಾದ ಕೆಂಪಮ್ಮ, ಹನುಮಂತಯ್ಯ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು.