ಹಾರನಹಳ್ಳಿ(ಅರಸೀಕೆರೆ ತಾ.) ಮಾ. 9
ಭವ್ಯ ಇತಿಹಾಸ ಪರಂಪರೆ ಸಾರುವ ಅನೇಕ ಶಿವ ದೇವಾಲಯಗಳು ಅರಸೀಕೆರೆ ತಾಲೂಕಿನಲ್ಲಿವೆ. ಕೆಲವು ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವ ಪ್ರಸಿದ್ಧ ಶಿವಾಲಯಗಳಿವೆ. ಈ ದೇವಾಯ ಕಂಬಗಳು ಮತ್ತು ಕಲ್ಲಿನ ಗೋಡೆಗಳ ಮೇಲೆ ಕೆತ್ತಿರುವ ಕಲಾಕೃತಿಗಳು ಆ ಕಾಲದ ಕಲಾ ಸೊಬಗನ್ನು ಸೂಸುತ್ತವೆ. ದೇವಾಲಯಗಳ ಸೌಂದರ್ಯವನ್ನು ನೋಡಲು ಮನಸ್ಸಿಗೆ ಅಂದ, ಉಲ್ಲಾಸ.
ಅರಸೀಕೆರೆ ಶಿವಾಲಯ: ಕ್ರಿ.ಶ.1220 ರಲ್ಲಿ ಹೊಯ್ಸಳ ದೊರೆ ಇಮ್ಮಡಿ ನರಸಿಂಹನ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಶಿವಾಲಯದ ಸುತ್ತಲೂ 120 ಚಿತ್ರಪಟ್ಟಿಕೆಗಳು, ಲಕ್ಷ್ಮಿ, ವಿಷ್ಣು, ಸಪ್ತಮಾತ್ರಿಕೆಯರು, ಶಿವ ಪಾರ್ವತಿ, ಶಿವ ವಿಷ್ಣು, ಸರಸ್ವತಿ, ಕೇಶವ ಲಕ್ಷ್ಮಿ, ವಿಗ್ರಹಗಳು ಆಕರ್ಷಕ ಕೆತ್ತನೆಗಳಿಂದ ಕಂಗೊಳಿಸುತ್ತವೆ. ತಳಮಟ್ಟದಿಂದ 3 ಅಡಿ ಎತ್ತರದ ಮೇಲಿನ ಸಾಲಿನಲ್ಲಿ ಯಕ್ಷ, ಹಂಸ ಗೋಪುರಗಳ ಸಾಲುಗಳಿವೆ. ಮಂಟಪದ ಮಧ್ಯದಲ್ಲಿ ವಿಶಾಲವಾದ ಕಟ್ಟೆಯ ಸುತ್ತಲೂ ನಾಲ್ಕು ಆಧಾರಸ್ತಂಭಗಳಿವೆ. ಇವುಗಳ ಸುತ್ತಲೂ ಇರುವ ಕಲ್ಲಿನ ಜಗತಿಯ ಮೇಲೆ ಗಜಸಾಲುಗಳು ಈ ಆಧಾರ ಸ್ತಂಭಗಳ ಮೇಲೆ ಆನೇಕ ಕುಸುರಿ ಕೆಲಸಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಮೇಲಿನ ತೊಲೆಗಳಲ್ಲಿ ಅಷ್ಟಕೋನಾಕೃತಿಯಲ್ಲಿರುವ ಸಾಲುಗಳಲ್ಲಿ ನಂದೀಶ್ವರ, ಕುಬೇರ, ನರಸಿಂಹ ವಿಗ್ರಹಗಳು ದುಷ್ಕರ್ಮಿಗಳಿಂದ ಪಾರಾಗಿ ಇಂದಿಗೂ ತಮ್ಮ ಆಕರ್ಷಣೆ ಉಳಿಸಿಕೊಂಡಿವೆ.ಸುಖನಾಸಿಯ ಮೇಲ್ಭಾಗದಲ್ಲಿ ಎರಡು ಸಾಲು ಚಿತ್ರಪಟ್ಟಿಕೆಗಳಿವೆ. ಕೆಳಗಿನ ಸಾಲಿನಲ್ಲಿ ಋಷಿ ಪಾಂಡವರಿಗೆ
ಬೋಧಿಸುತ್ತಿರುವ ದೃಶ್ಯ, ಕೃಷ್ಣನೊಡನೆ ಇರುವ ನರ್ತಕಿ, ದ್ರೋಣಾಚಾರ್ಯರು ಪಾಂಡವ ಮತ್ತು ಕೌರವರಿಗೆ ಧನುರ್ವಿದ್ಯೆಯ ಹೇಳಿ ಕೊಡುತ್ತಿರುವುದು, ಪಾಂಡವರು-ಕೌರವರು ದ್ಯೂತವಾಡುತ್ತಿರುವುದು. ಮೇಲಿನ ಸಾಲಿನಲ್ಲಿ ಸಮುದ್ರ ಮಂಥನ, ಶಿವತಾಂಡವ, ಕೈಲಾಸದಲ್ಲಿ ಶಿವನ ಆಸ್ಥಾನದಲ್ಲಿ ಕುಳಿತಿರುವ ದೇವತೆಗಳು, ಗರ್ಭಗುಡಿಯ ದ್ವಾರದಲ್ಲಿ ದ್ವಾರಪಾಲಕರು, ಲತಾಸಿಂಹ, ಗಜಲಕ್ಷ್ಮಿ ಅದರ ಮೇಲೆ ಶಿವ ಆಸೀನರಾಗಿ ಬಲಭಾಗದಲ್ಲಿ ಗಣೇಶ, ಎಡಭಾಗದಲ್ಲಿ ಷಣ್ಮುಖ ಮತ್ತು ವಿಷ್ಣು ವಿಗ್ರಹಗಳಿವೆ. ಗರ್ಭಗುಡಿಯಲ್ಲಿ ಸುಂದರವಾದ ಶಿವಲಿಂಗದ ವಿಗ್ರಹ ಕಲಾರಸಿಕರನ್ನು ಬೆರಗುಗೊಳಿಸುವಂತಿದೆ ಎನ್ನುತ್ತಾರೆ ಆರ್ಚಕರ ಸಂಘದ ಸಂಚಾಲಕ ಹಾರನಹಳ್ಳಿ ನಾಗೇಂದ್ರ .
ಹಾರನಹಳ್ಳಿ ಸೋಮೇಶ್ವರ ದೇವಾಲಯ: ಅರಸೀಕೆರೆ ತಾಲ್ಲೂಕಿಗೆ ಸೇರಿರುವ ಹಾರ್ನಳ್ಳಿ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವ ಸೋಮೇಶ್ವರ ದೇವಾಲಯ ಅಪೂರ್ವ ಚಮತ್ಕಾರಿತವಾದ ಅದ್ಭುತ ಶಿಲ್ಪಕಲೆಯಿಂದ ಕಂಗೊಳಿಸುತ್ತಿದೆ.
ಮಾವುತನಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನ ಜಾವಗಲ್ ಹೋಬಳಿಗೆ ಸೇರಿದ ಮಹಾಲಿಂಗೇಶ್ವರ ದೇವಾಲಯವನ್ನು ಹೊಯ್ಸಳ ವಂಶದವರು ಕಟ್ಟಿದ್ದು 3 ಗರ್ಭಗುಡಿ ಹೊಂದಿದ್ದು, ಮುಖ್ಯ ಗರ್ಭಗುಡಿಯಲ್ಲಿ ಮಹಾಲಿಂಗೇಶ್ವರ ಉತ್ತರ ಮತ್ತು ದಕ್ಷಿಣ ಗರ್ಭಗುಡಿಯಲ್ಲಿ ವೀರಭದ್ರ ಮತ್ತು ಭೈರವನ ವಿಗ್ರಹಗಳಿವೆ. ಹಾಗೆಯೇ ತಾಲೂಕಿನಲ್ಲಿ ಅಗ್ರಹಾರದ ಮಲ್ಲೇಶ್ವರ, ಅಣ್ಣಾಪುರದ ಮಲ್ಲೇಶ್ವರ, ಅರಸೀಕೆರೆ ಭವಾನಿಶಂಕರ, ಬಾಣಾವರ ವೀರಭದ್ರೇಶ್ವರ, ಬಾಗೀವಾಳು ಸೋಮೇಶ್ವರ, ಬಂಡೀಹಳ್ಳಿ ಉಜ್ಜನೇಶ್ವರ, ಚಗಚಗೆರೆ ಮಲ್ಲೇಶ್ವರ, ಹೊಳಲ್ಕೆರೆ ಪ್ರಸನ್ನರಾಮೇಶ್ವರ, ಹುಲ್ಲೇಕೆರೆ ಕಲ್ಲೇಶ್ವರ, ಕಣಕಟ್ಟೆ ಕಲ್ಲೇಶ್ವರ, ತಳಲೂರು ಶಂಕರೇಶ್ವರ ಹೀಗೆ ನಮ್ಮ ತಾಲೂಕಿನಲ್ಲಿ ಪ್ರಸಿದ್ಧ ದೇವಾಲಯಗಳಿವೆ. ಮಹಾಶಿವರಾತ್ರಿ ಭಾವೈಕ್ಯತೆಯ ಸಂಕೇತವಾಗಿದ್ದು ಇಂತಹ ಪುಣ್ಯದಿನದಂದು ಶಿವನಿಗೆ ಅಭಿಷೇಕ, ಬಿಲ್ವಪತ್ರೆ, ಮಹಾಪೂಜೆ ನಡೆಸಿ ಶಿವ ದೇಗುಲಗಳ ದರ್ಶನ ಪಡೆದು ಪುನೀತರಾಗೋಣ.