ಕಾಮಸಮುದ್ರ ಶಾಲೆಯಲ್ಲಿ ಯುವ ಸೌರಭ
ಕ.ಪ್ರ.ವಾರ್ತೆ ಹಾಸನ ಮಾ.10
ಕಾಮಸಮುದ್ರ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಯುವ ಸೌರಭ, ಚಿಗುರು ಕಾರ್ಯಕ್ರಮ ನಡೆಯಿತು.
ಎಳ್ಳೇಶಪುರ ಶಾಲೆ ಮುಖ್ಯ ಶಿಕ್ಷಕಿ ನಾಗರತ್ನ ಕಾರ್ಯಕ್ರಮ ಉದ್ಘಾಟಿಸಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಅಡಗಿದೆ. ಮುಖ್ಯವಾಗಿ ಮಕ್ಕಳಿಗೆ ಸೂಕ್ತ ಅವಕಾಶ ಕಲ್ಪಿಸಿ ಪೋಷಿಸಿದಲ್ಲಿ ಭವ್ಯ ಭಾರತದ ಸತ್ಪ್ರಜೆಗಳಾಗಿ ಮಾಡುವ ಮೂಲಕ ತಂದೆ ತಾಯಿ ಹಾಗೂ ವಿದ್ಯೆ ಎರೆದ ಗುರುಗಳಿಗೆ ಕೀರ್ತಿಯನ್ನು ತರಲು ಸಾಧ್ಯವೆಂದು ಹೇಳಿದರು.
ಭವಿತ ಮನೋಹರ್ರಿಂದ ಗಾಯನ, ಮಕ್ಕಳಿಂದ ಚಿಗುರು ಕಾರ್ಯಕ್ರಮ ನಡೆಯಿತು. ಮಕ್ಕಳು ಜಾನಪದ ನೃತ್ಯವನ್ನು ಮಾಡುವ ಮೂಲಕ ಎಲ್ಲರ ಮನಸೆಳೆದರು. ಶೈಕ್ಷಣಿಕ ಸಮಿತಿ ಗೌರವಾಧ್ಯಕ್ಷ ಶಿವಸ್ವಾಮಿ, ಅಧ್ಯಕ್ಷ ಶ್ರೀಕಂಠೇಗೌಡ, ಸದಸ್ಯ ಲಕ್ಕಯ್ಯ, ಕಳಸಯ್ಯ, ತಾಯಮ್ಮ, ಮುಖ್ಯ ಶಿಕ್ಷಕ ತಿ.ರಾಮಕೃಷ್ಣಯ್ಯ, ಕೆ.ವಿ. ದಮಯಂತಿ, ಜಯಂತಿ, ಅನಿತಾ ಬಾಯಿ, ಗಾಯಿತ್ರಿ, ಇತರರು ಇದ್ದರು.