ಭಾರತದಲ್ಲಿ ಬಲವಾಗಿ ಬೀಸುತ್ತಿರುವ ಪಾಶ್ಚಿಮಾತ್ಯ ಗಾಳಿ
ಕ.ಪ್ರ. ವಾರ್ತೆ ್ಣ ಹಾಸನ ್ಣ ಮಾ.10
ಭಾರತದಲ್ಲಿ ಪಾಶ್ಚಿಮಾತ್ಯದ ಗಾಳಿ ಬಲವಾಗಿ ಬೀಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಆಯುಷ್ ನಿರ್ದೇಶನಾಲಯವು ಭಾರತೀಯ ಆಯುಷ್ ವೈದ್ಯ ಪದ್ಧತಿಗಳ ಸಬಲೀಕರಣಕ್ಕೆ ಅಹರ್ನಿಶಿ ಶ್ರಮಿಸುತ್ತಿದೆ ಎಂದು ರಾಜ್ಯ ಆಯುಷ್ ವಿಭಾಗದ ಮುಖ್ಯ ಆಡಳಿತಾಧಿಕಾರಿ ಕೆ. ಜ್ಯೋತಿ ತಿಳಿಸಿದರು.
ನಗರದ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ರಾಜ್ಯ ಸರ್ಕಾರದ ಆಯುಷ್ ನಿರ್ದೇಶನಾಲಯ ಅಡಿಯಲ್ಲಿ ಹಾಸನ ಜಿಲ್ಲಾ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಆಯುಷ್ ವಿಭಾಗವು ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿರುವುದು ಪ್ರಶಂಸಾರ್ಹ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ಯಾಮಲಾದೇವಿ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ ವಿಭಾಗದ ಸರ್ಕಾರಿ ವೈದ್ಯರು ವೈದ್ಯಕೀಯ ಸೇವೆಯಲ್ಲಿ ಸಮನ್ವಯತೆಯಿಂದ ಸೇವಾ ನಿರತರಾಗಿರುವುದು ಆರೋಗ್ಯ ಇಲಾಖೆಯ ಸೇವೆಯನ್ನು ಇನ್ನಷ್ಟು ಯಶಸ್ವಿಗೊಳಿಸಿದೆ ಎಂದು ಶ್ಲಾಘಿಸಿದರು.
ಹಾಸನಾಂಬ ದಂತ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ರವೀಂದ್ರ, ಜಿಲ್ಲಾ ಆಯುಷ್ ನೋಡಲ್ ಅಧಿಕಾರಿ ಡಾ.ನಾಗರಾಜ್, ಕಾರ್ಯಾಗಾರದ ನಿಯೋಜಕ ಡಾ. ವೆಂಕಟೇಶ್ ಬೇಂದ್ರೆ ಇದ್ದರು.
ಆಯುರ್ವೇದ ಅರಿವು ಕಾರ್ಯಾಗಾರ: ಹಾಸನ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿ.ಬಿ. ನಂಜರಾಜು ಮಾತನಾಡಿ, ಜಿಲ್ಲಾ ಆಯುಷ್ ವಿಭಾಗವು ಅವಿರತವಾಗಿ ಶ್ರಮಿಸುತ್ತಿದೆ.
ಕಳೆದ ಸಾಲಿನಲ್ಲಿ 18 ಆರೋಗ್ಯ ತಪಾಸಣೆ ಶಿಬಿರ 64 ಮನೆಮದ್ದು ಕಾರ್ಯಕ್ರಮ, 396 ಆಯುರ್ವೇದ ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಂಡು, ರಾಜ್ಯದಲ್ಲಿಯೇ ಮಹತ್ವಪೂರ್ಣ ಸಾಧನೆ ಮಾಡಿದೆ. ಶೀಘ್ರದಲ್ಲಿಯೇ 1500 ಆಯುಷ್ ವೈದ್ಯರ ನೇಮಕಾತಿಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಮುಖಾಂತರ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹರಾವ್ ಮಾತನಾಡಿ, ವಿದೇಶಗಳಲ್ಲಿ ಆಯುರ್ವೇದ ಕಡೆ ಸೆಳೆತ ಹೆಚ್ಚಾಗುತ್ತಿದೆ. ಅನೇಕ ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಆಯುರ್ವೇದಕ್ಕೆ ಪ್ರಥಮ ಪ್ರಾಶಸ್ತ್ಯ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆಯುಷ್ ನಿರ್ದೇಶನಾಲಯ ಸಹಕಾರದೊಂದಿಗೆ ಆಯುಷ್ ವೈದ್ಯಾಧಿಕಾರಿಗಳು ತಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸಿಕೊಂಡು ಆಯುಷ್ ಸಬಲೀಕರಣಕ್ಕೆ ಮುಂದಾಗ ಬೇಕೆಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ 100 ಕ್ಕೂ ಹೆಚ್ಚು ಸರ್ಕಾರಿ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು. ಡಾ ರವೀಂದ್ರ, ಡಾ. ಪಿ ಹೇಮಂತ್‌ಕುಮಾರ್ ಆಯುರ್ವೇದದ ಸಿದ್ಧಾಂತಗಳ ಕುರಿತು, ಡಾ.ಜಮೀಲಾ ಬೇಗಂ ಯುನಾನಿ ವೈದ್ಯ ಪದ್ಧತಿಯ ಕುರಿತು ಉಪನ್ಯಾಸ ನೀಡಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಯುರ್ವೇದ, ಹೋಮಿಯೋಪತಿ, ಯೋಗ, ಸಿದ್ಧ, ಯುನಾನಿ, ದಂತ ವೈದ್ಯಕೀಯ ಹಾಗೂ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಬಗ್ಗೆ ಪ್ರಶ್ನೋತ್ತರಗಳನ್ನು ಆಧರಿಸಿದ ಸಂವಾದ ಅರ್ಥಪೂರ್ಣವಾಗಿತ್ತು.