'ಸ್ಕೌಟ್ಸ್, ಗೈಡ್ಸ್ ಚಳವಳಿ ತತ್ವಗಳನ್ವಯ ಕಾರ್ಯ ನಿರ್ವಹಿಸಿ'
ಕನ್ನಡಪ್ರಭ ವಾರ್ತೆ ಹಾಸನ ಮಾ. 10
ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಳೀಯ ಸಂಸ್ಥೆಗಳ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ಅದರ ಚಳವಳಿಯ ತತ್ವ ನೀತಿಗಳನ್ವಯ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತ ಬಿ. ಷಣ್ಮುಖಪ್ಪ ತಿಳಿಸಿದರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ಐಡಿಸಿ ಕಾರ್ಯದರ್ಶಿ, ಖಜಾಂಚಿಗಳ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮುದಾಯ ಅಭಿವೃದ್ಧಿಯಲ್ಲಿ ಪರಿಸರ ಸಂರಕ್ಷಣೆ, ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ರಾಜ್ಯ ಸಂಸ್ಥೆಯಿಂದ ಸ್ಥಳೀಯ ಸಂಸ್ಥೆಗಳನ್ನು ಬಲಗೊಳಿಸಬೇಕೆಂಬ ದಿಸೆಯಲ್ಲಿ 5000 ಸಾವಿರ ರು. ಅನುದಾನ ನೀಡಲಾಗುತ್ತಿದೆ. ಶಿಕ್ಷಕರು ಶಾಲೆಗಳಲ್ಲಿ ಘಟಕಗಳನ್ನು ತೆರೆಯುವ ಮೂಲಕ ಸರ್ವಾಂಗಿಣ ಬೆಳವಣಿಗೆಗೆ ಸಹಕರಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಬದುಕಿನಲ್ಲಿ ಬದ್ಧತೆ ಇದ್ದರೆ ಮಾತ್ರ ಸಮಾಜದಲ್ಲಿ ಉತ್ತಮವಾದ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ಸ್ಕೌಟ್ಸ್ ಗೈಡ್ಸ್ ಶಿಕ್ಷಣದಲ್ಲಿ ಅಡಕವಾಗಿರುವ ಹೊರಾಂಗಣ ಚಟುವಟಿಕೆಗಳನ್ನು ಕಲಿಸಿ ಅವರಲ್ಲಿ ರಾಷ್ಟ್ರೀಯ ಭಾವನೆ ಮೂಡಿಸಿದರೆ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಇಲಾಖೆಯಿಂದ ಎಲ್ಲಾ ರೀತಿಯಲ್ಲಿ ಸ್ಕೌಟಿಂಗ್ ಮತ್ತು ಗೈಡಿಂಗ್ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಎಚ್.ಎಂ ಗೌಡಯ್ಯ (ಎಡಿಸಿ) ಅವರಿಗೆ ಟಾಕ್ ಟು ಮೆಡಲ್ ಆಫ್ ಮೆರಿಟ್ ಪ್ರಶಸ್ತಿಯನ್ನು ಮುಖ್ಯ ಆಯುಕ್ತರು ನೀಡಿ ಗೌರವಿಸಿದರು. ಕಾಂಚನಮಾಲಾ ಇವರಿಗೆ ಮೆಡಲ್ ಆಫ್ ಮೆರಿಟ್ ನೀಡಿ ಜಾನಕಿ ವೇಣುಗೋಪಾಲ್ ಗೌರವಿಸಿದರು.
ಶಾಂತಗಿರಿಯಣ್ಣ, ಎಸ್.ಕೆ. ಪ್ರಭ, ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ, ಶಿಕ್ಷಣಾಧಿಕಾರಿ ಲತ, ರಾಮಲತ, ಜಾನಕಿ, ವೇಣುಗೋಪಾಲ್, ಎಚ್.ಎಂ. ಗೌಡಯ್ಯ, ಶೈಲಾ ಅಭಿನಂದನ್, ಪ್ರಕಾಶ್ ಎಸ್. ಯಾಜಿ, ಕಿರಣ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.