ಮಾವನಿಗೆ ಸೋಲು, ಸೊಸೆಗೆ ಗೆಲುವು...
ಕ.ಪ್ರ.ವಾರ್ತೆ ಹಾಸನ ಮಾ. 11
ಮಾವನಿಗೆ ಸೋಲು...ಸೊಸೆಗೆ ಗೆಲುವು... ಒಂದೇ ಮತದಲ್ಲಿ ಗೆದ್ದ ಮಹಿಳಾ ಅಭ್ಯರ್ಥಿ.... ಮರು ಎಣಿಕೆಯಲ್ಲೂ ಒಂದೇ ಮತದಿಂದ ಜಯ... ಏಕಕಾಲಕ್ಕೆ ಸಂಭ್ರಮ, ನಿರಾಶೆ ಅನುಭವ....ಬೇಕಾದವರನ್ನು ಗೆಲ್ಲಿಸಿ ಸೋತ ನಗರಸಭೆ ಮಾಜಿ ಅಧ್ಯಕ್ಷ...
ಇವು ಹಾಸನ ನಗರಸಭೆ 35 ವಾರ್ಡ್ ಗಳ ಮತಗಳ ಎಣಿಕೆ ನಡೆಯುವ ಸಂದರ್ಭದಲ್ಲಿ ಕಂಡು ಬಂದ ವಿಶೇಷ.
ಜೆಡಿಎಸ್ ಟಿಕೆಟ್ ಸಿಗದ ಕಾರಣ ಕೆಜೆಪಿಯಿಂದ 14 ನೇ ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಬಿ.ಎಸ್. ಉಷಾ ಗೆದ್ದಿದ್ದರೇ, ಅವರ ಮಾವ ಬಿ.ಎನ್. ಮಹಾತೇಂಶ್ 28 ನೇ ವಾರ್ಡ್ನಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದಾರೆ.
ಒಂದೇ ಮತದಿಂದ ಗೆಲವು...:31 ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಶ್ರೀ ವಿದ್ಯಾ ಕೇವಲ ಒಂದೇ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು. ವಿದ್ಯಾ 432 ಮತಗಳ ಪಡೆದರೇ ಅವರ ಸಮೀಪ ಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸಬೀನಾ 431 ಮತ ಪಡೆದರು. ಮತ ಎಣಿಕೆ ಸಂದರ್ಭದಲ್ಲಿ ಸಬೀನಾ ಕಡೆಯವರು ಮುಂದೆಯೂ ಅಂತರ ಹೆಚ್ಚಾಗುತ್ತದೆ ಎಂದು ಭಾವಿಸಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ನಂತರ ಧ್ವನಿ ವರ್ಧಕದಿಂದ ಶ್ರೀ ವಿದ್ಯಾ 1 ಮತಗಳ ಅಂತರದಿಂದ ಗೆದ್ದರು ಎಂಬ ಸುದ್ದಿ ಕೇಳುತ್ತಿದ್ದಂತೆ ದಿಗ್ಭ್ರಾಂತರಾದ ಸಬೀನಾ ಬೆಂಬಲಿಗರು ಮತ್ತೆ ಎಣಿಕಾ ಕೇಂದ್ರಕ್ಕೆ ಬಂದು ಮರು ಎಣಿಕೆ ಮಾಡಿಸಿದರು. ಆಗಲೂ ವಿದ್ಯಾ 1ಮತಗಳ ಅಂತರಿಂದ ಗೆದ್ದರು. ಹೀಗೆ ಸಬೀನಾ ಬೆಂಬಲಿಗರು ಏಕಕಾಲದಲ್ಲಿ ಸಂಭ್ರಮ ಮತ್ತು ದುಃಖ ಎರಡನ್ನು ಅನುಭವಿಸಿದರು.
ಗೆಲ್ಲಿಸಿ ಸೋತವರು... ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಅವರೇ ಬೇರೆ ಅಭ್ಯರ್ಥಿಯನ್ನು ಗೆಲ್ಲಿಸಿ ಸೋತವರು. ವಾರ್ಡ್ ನಂ 1 ಕ್ಕೆ ತಮ್ಮ ಬೆಂಬಲಿಗ ಭಾನು ಪ್ರಕಾಶ್ ಅವರಿಗೆ ಪಕ್ಷದ ಒಳಗೆ ಮತ್ತು ಹೊರಗೆ ಪ್ರಬಲ ವಿರೋಧ ಕಂಡು ಬಂದರೂ ಲೆಕ್ಕಿಸದೇ ಟಿಕೆಟ್ ಕೊಡಿಸಿ, ಗೆಲ್ಲಿಸಿದರು. ಆದರೆ 34 ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಶಂಕರ್ ಅವರು, ಕಾಂಗ್ರೆಸ್ ಅಭ್ಯರ್ಥಿ ಸಿ.ಟಿ.ಕುಮಾರ್ ಅವರ ವಿರುದ್ಧ 261 ಮತಗಳ ಅಂತರದಿಂದ ಸೋಲುಂಡರು.