ಆದಾಯಕ್ಕೆ ಎಳನೀರು, ಕೊಬ್ಬರಿ ಮಾರಿ
ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಮಾ.12
ತೆಂಗಿಗೆ ಸೂಕ್ತ ಬೆಲೆ ಸಿಗದ ಕಾರಣ ಪರ್ಯಾಯವಾಗಿ ಎಳೆನೀರು ಮತ್ತು ಕೊಬ್ಬರಿ ಮಾಡಿ ಮಾರುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ತೋಟಗಾರಿಕೆ ಉಪ ನಿರ್ದೇಶಕ ಶಕೀಲ್ ಅಹಮ್ಮದ್ ತಿಳಿಸಿದರು.
ಅವರು ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೆಂಗು ಅಭಿವೃಧ್ಧಿ ಮಂಡಳಿ ಆಶ್ರಯದಲ್ಲಿ ಜಿಲ್ಲೆಯ ಯುವ ತೆಂಗು ಬೆಳೆಗಾರರಿಗೆ ಇತ್ತೀಚೆಗೆ ಏರ್ಪಡಿಸಿದ್ದ ತೆಂಗಿನ ಮರ ಹತ್ತುವ ಸಾಧನ ಮತ್ತು ಸಸ್ಯ ಸಂರಕ್ಷಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತೆಂಗು ಹಾಸನ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಬೆಳೆಗಾರರು ಕಾಯಿ ಕೆಡವಲು ಕೂಲಿ ಕಾರ್ಮಿಕರ ತೊಂದರೆ ಎದುರಿಸುತ್ತಿದ್ದಾರೆ.
ಈ ಮರ ಹತ್ತುವ ಸಾಧನ ರೈತರಿಗೆ ಒಳ್ಳೆಯ ವರದಾನವಾಗಲಿದ್ದು ಮತ್ತು ತರಬೇತಿ ಪಡೆದ ಯುವಕರು ಗುಂಪು ರಚನೆ ಮಾಡಿಕೊಂಡು ಇದನ್ನು ಒಂದು ಉದ್ದಿಮೆಯಾಗಿ ತೆಗದುಕೊಳ್ಳಲು ಸಲಹೆ ನೀಡಿದರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ವಿಜ್ಞಾನಿಗಳ ಮಾರ್ಗದರ್ಶನವನ್ನು ಜಿಲ್ಲೆಯ ರೈತರು ಮತ್ತು ರೈತ ಮಹಿಳೆಯರು ಪಡೆದು ಉತ್ತಮ ಬೆಳೆಗಳನ್ನು ಪಡೆಯಬೇಕು ಹಾಗೂ ತೆಂಗಿನ ಮಧ್ಯೆ ಲಾಭದಾಯಕ ಅಂತರ ಬೆಳೆಗಳನ್ನು ಬೆಳೆಯುವುದರ ಮೂಲಕ ಆದಾಯವನ್ನು ಹೆಚ್ಚಿಸಕೊಳ್ಳಬೇಕೆಂದು ಕರೆ ನೀಡಿದರು.
ಕೇಂದ್ರದ ತೋಟಗಾರಿಕಾ ವಿಜ್ಞಾನಿಗಳಾದ ಡಾ.ಟಿಎಸ್.ಮಂಜುನಾಥಸ್ವಾಮಿ ಅವರು ತೆಂಗಿನ ಮಧ್ಯೆ ನುಗ್ಗೆ, ಪಪ್ಪಾಯ, ಸಪೋಟದಂತಹ ಬೆಳೆಗಳನ್ನು ಬೆಳೆಯಲು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕೇಂದ್ರದ ವಿಜ್ಞಾನಿ ಡಾ.ಟಿಎಸ್.ಮಂಜುನಾಥಸ್ವಾಮಿ ಸ್ವಾಗತಿಸಿದರು. ಕೇಂದ್ರದ ವಿಜ್ಞಾನಿ ಡಾ. ಓ.ಆರ್. ನಟರಾಜ ಮತ್ತು ಡಾ.ಎ.ಸಿ.ಗಿರೀಶ್ ಇದ್ದರು. ಇದರಲ್ಲಿ ಹಾಸನ ಜಿಲ್ಲೆಯ 20 ಶಿಬಿರಾರ್ಥಿಗಳು ತರಬೇತಿಯಲ್ಲಿ ಇದ್ದರು.