ಜಾನಪದ ಅಧ್ಯಯನ ಅತ್ಯಂತ ಜರೂರಾಗಿದೆ: ಡಾ. ಹೆಬ್ಬಾರ್
ಕನ್ನಡಪ್ರಭವಾರ್ತೆ ಹಾಸನ ಮಾ. 10
ಹಿಂದಿನ ಜೀವನ ಶೈಲಿಯನ್ನು ತೋರ್ಪಡಿಸಲು ನಮ್ಮ ಜನಪದ ಸಂಸ್ಕೃತಿ ಮುಖ್ಯವಾಗುತ್ತದೆ ಎಂದು ವೈದ್ಯ ಡಾ.ಗುರುರಾಜ ಹೆಬ್ಬಾರ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸಾಂಸ್ಕೃತಿಕ ವಿಭಾಗ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಾನಪದವನ್ನು ಸಂಶೋಧನೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಜಾನಪದ ಅಧ್ಯಯನ, ಅದರ ಉಪಯೋಗ ಅತ್ಯಂತ ಜರೂರಾಗಿದೆ. ಗುರು ಹಿರಿಯರಿಗೆ ಗೌರವ ಕೊಡುವ ಜವಾಬ್ದಾರಿಯನ್ನು ಈ ತರಹದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನೀಡುತ್ತವೆ ಎಂದರು.
ಪ್ರವಾಸೋದ್ಯಮ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಬೋರೇಗೌಡ ಮಾತನಾಡಿ, ಹಿಂಜರಿಕೆ ಸ್ವಭಾವ ಬಿಟ್ಟರೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಪ್ರತಿಭೆ ಮುಖ್ಯವೇ ಹೊರತು ಅದರ ಫಲಿತಾಂಶವಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ಮಾತನಾಡಿ, ಜಾನಪದದ ಗಟ್ಟಿತನ ಎನ್ನುವುದು ಗ್ರಾಮಗಳಲ್ಲಿದೆ. ಗ್ರಾಮಗಳು ಸಾಂಸ್ಕೃತಿಕವಾಗಿ ಸದೃಢವಾದಷ್ಟು ನಮ್ಮ ಸಾಂಸ್ಕೃತಿಕ ಜಗತ್ತು ಗಟ್ಟಿಗೊಳ್ಳುತ್ತದೆ. ಸಂಕೀರ್ಣಗೊಂಡಿರುವ ಬದುಕಿಗೆ ಸಂಜೀವಿನಿಯಾಗಿ ಜಾನಪದ ನಮ್ಮನ್ನು ಉಳಿಸಿ, ಬೆಳೆಸುತ್ತದೆ ಎಂದು ನುಡಿದರು.
ಜನಪದ ಸಂಸ್ಕೃತಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಬಹಳವಾಗಿದೆ ಎಂದ ಅವರು, ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಜಾಗೃತಗೊಳಿಸುತ್ತದಷ್ಟೇ ಅಲ್ಲ. ಅವರನ್ನು ಮುಂದಿನ ಭವಿಷ್ಯದ ಭವ್ಯ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಚಂದ್ರೇಗೌಡ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆ ಇದು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನಿಮತಿ, ಸ್ಮತಿ ಪ್ರಾರ್ಥಿಸಿದರು. ಕಿರಣ್ ಸ್ವಾಗತಿಸಿದರು. ಟಿ.ಎಸ್.ಅಶ್ವಿನಿ ವಂದಿಸಿದರು. ಜಯಂತ ನಿರೂಪಿಸಿದರು.