ಬದುಕಿನಲ್ಲಿ ಬದ್ಥತೆ ಇದ್ದರೆ ಸಮಾಜಮುಖಿ ಕಾರ್ಯ: ಡಿಡಿಪಿಐ
ಹಾಸನ: ಪ್ರತಿಯೊಬ್ಬರ ಬದುಕಿನಲ್ಲಿ ಬದ್ಧತೆ ಇರಬೇಕು. ಆಗ ಮಾತ್ರ ತಮ್ಮಿಂದ ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ಬಸವರಾಜು ತಿಳಿಸಿದರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಮೈಸೂರು ವಿಭಾಗೀಯ ಮಟ್ಟದ 3 ದಿನಗಳ ಎಡಿಸಿ ಕಾರ್ಯದರ್ಶಿ, ಖಜಾಂಚಿಗಳ ಸಮಾವೇಶದಲ್ಲಿ ಮಾತನಾಡಿ, ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ,ದೇಶಪ್ರೇಮ, ಪರಿಸರ ಪ್ರಜ್ಞೆ, ಸಮುದಾಯಕ್ಕೆ ಸಲ್ಲಿಸಬೇಕಾದ ಸೇವೆಗಳ ಬಗ್ಗೆ ತಿಳಿಸಿ ಮಕ್ಕಳ ಮನಸ್ಸನ್ನು ಪರಿವರ್ತಿಸಿದಾಗ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದರು.
ರಾಜ್ಯ ಮುಖ್ಯ ಆಯುಕ್ತ ಕೊಂಡಜ್ಜಿ ಬಿ. ಷಣ್ಮುಖಪ್ಪ ಮಾತನಾಡಿ, ರಾಜ್ಯ ಸಂಸ್ಥೆಯಿಂದ ಸ್ಥಳೀಯ ಸಂಸ್ಥೆಗಳಿಗೆ 5 ಸಾವಿರ ಅನುದಾನ ನೀಡಿ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯ ನೀಡುವುದಾಗಿ ಭರವಸೆ ನೀಡಿದರು.
ವ್ಯಕ್ತಿತ್ವ ವಿಕಸನ ಕೇಂದ್ರದ ಸುರೇಶ ಗುರೂಜಿ ಮಾತನಾಡಿ, ಒತ್ತಡ ನಿರ್ವಹಣೆ ಮಾಡುವ ಬಗ್ಗೆ ತಿಳಿಸಿಕೊಟ್ಟು, ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಚಿಂತನೆ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಕಷ್ಟಗಳು ಬರುತ್ತವೆ. ಅವುಗಳನ್ನು ಎದುರಿಸುವ ಬಗೆಯನ್ನು ಮಕ್ಕಳಿಗೆ ಶಿಕ್ಷಕರು ತಿಳಿಸಿಕೊಟ್ಟರೆ ಮುಂದೆ ಅವರೇ ಸಾಧನಾ ಪುರುಷರಾಗಿರುತ್ತಾರೆ ಎಂದರು.
ಶಾಂತ ಗಿರಿಯಣ್ಣ, ಎಸ್.ಕೆ.ಪ್ರಭ ಎಚ್.ಎಂ.ಗೌಡಯ್ಯ, ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ, ಶಿಕ್ಷಣಾಧಿಕಾರಿ ಲತಾ, ರಾಮಲತಾ, ಜಾನಕಿ ವೇಣುಗೋಪಾಲ್, ಸ್ಕೌಟ್ಸ್ ಆಯುಕ್ತ ಪ್ರಕಾಶ್ ಎಸ್. ಯಾಜಿ ಇತರರು ಇದ್ದರು.