ಅಬ್ದುಲ್ ಜಮೀಲ್ ಮರಳಿ ಕಾಂಗ್ರೆಸ್ಗೆ
ಕ.ಪ್ರ.ವಾರ್ತೆ ಅರಸೀಕೆರೆ ಮಾ. 13
ಕಳೆದ ಬಾರಿ ಕಾಂಗ್ರೆಸ್ನಿಂದ ಜೆಡಿಎಸ್ಗೆ ಪಕ್ಷಾಂತರಗೊಂಡು ಶಾಸಕ ಕೆ.ಎಂ. ಶಿವಲಿಂಗೇಗೌಡರ ಬೆಂಬಲಿಗರೆಂದೇ ಗುರುತಿಸಿಕೊಂಡಿದ್ದ ಮಾಜಿ ಪುರಸಭಾ ಉಪಾಧ್ಯಕ್ಷ ಹಾಗೂ ಮುಸ್ಲೀಂ ಜಮಾತ್ ಕಮಿಟಿಯ ಕಾರ್ಯದರ್ಶಿ ಅಬ್ದುಲ್ ಜಮೀಲ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಮಾಜಿ ಸಚಿವ ಬಿ. ಶಿವರಾಂ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ನಂತರ ಮಾತನಾಡಿದ ಅಬ್ದುಲ್ ಜಮೀಲ್ ಪುರಸಭಾ ಸದಸ್ಯರೊಬ್ಬರ ಚಿತಾವಣೆಯಿಂದ ತಾವು ಆಯ್ಕೆಯಾದರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ದುರುದ್ದೇಶದಿಂದ ಎದುರಾಳಿಗಳ ಕೈ ಬಲಪಡಿಸಿ ಪುರಸಭಾ ಚುನಾವಣೆಯಲ್ಲಿ ಕೇವಲ 22 ಮತಗಳ ಅಂತರದಿಂದ ಸೋಲುಣಿಸಿದ್ದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದೇ ಇರುವುದರಿಂದ ಮನನೊಂದು ರಾಜಿನಾಮೆ ನೀಡಿರುವುದಾಗಿ ತಿಳಿಸಿದರು.
ಜೆಡಿಎಸ್ ತಮಗೆ ಅಧಿಕೃತ ಬಿ ಫಾರಂ ನೀಡಿದ ನಂತರವೂ ನನ್ನನ್ನು ಸೋಲಿಸುವ ವ್ಯವಸ್ಥಿತ ಪಿತೂರಿ ನಡೆಸಲಾಯಿತು. ಈ ಬಗ್ಗೆ ಶಾಸಕರಿಗೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ತಮಗೆ ಅಪಮಾನ ಮಾಡಿದ ಪಕ್ಷದಲ್ಲಿ ಒಂದು ಕ್ಷಣವೂ ಉಳಿಯಬಾರದು ಎಂದು ನಿರ್ಧರಿಸಿ ಪಕ್ಷ ತೊರೆದಿರುವುದಾಗಿ ಸ್ಪಷ್ಟಪಡಿಸಿದರು.
ಹಣ, ತೋಳ್ಬಲ, ಮದ್ಯ ಮಾಂಸದೂಟಗಳಿಂದ ದೂರವಿರುವ ನಮ್ಮಂತಹವರಿಗೆ ಜೆಡಿಎಸ್ನಲ್ಲಿ ಇರಲು ಸಾಧ್ಯವಿಲ್ಲವೆಂದು ಬಹುದಿನಗಳಿಂದಲೂ ಕೇಳಿಬರುತ್ತಿತ್ತಾದರೂ ಶಾಸಕರ ಮೇಲಿನ ಗೌರವದಿಂದಾಗಿ ಜೆ.ಡಿ.ಎಸ್ನಲ್ಲೇ ಉಳಿದಿದ್ದೆ. ಆದರೆ ಶಾಸಕರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹೊಡೆದು ಆಳುವ ನೀತಿಯಿಂದ ಮನಸ್ಸಿಗೆ ನೋವಾಗಿದೆ. ಅಲ್ಲದೇ ಚಾಡಿ ಹೇಳುವವರ ಮಾತಿಗೆ ಮನ್ನಣೆ ನೀಡುವುದನ್ನು ಶಾಸಕರು ಮೈಗೂಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದರಿಂದ ಬೇಸರಗೊಂಡಿರುವ ಇನ್ನೂ ಅನೇಕ ಮುಸ್ಲಿಂ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಕಾಂಗ್ರೆಸ್ ತತ್ವ, ಸಿದ್ಧಾಂತ ಹಾಗೂ ಮಾಜಿ ಸಚಿವ ಬಿ ಶಿವರಾಂ ನಾಯಕತ್ವ ಗುಣಗಳಿಂದಾಗಿ ಹಾಗೂ ರಾಹುಲ್ ಗಾಂಧಿಯವರ ಯುವ ನಾಯಕತ್ವ ಮೆಚ್ಚಿ ಹಾಗೂ ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ನಿಂದ ಮಾತ್ರ ನ್ಯಾಯ ದೊರೆಯಲು ಸಾಧ್ಯ ಎಂಬುದನ್ನು ಮನಗಂಡು ಪಕ್ಷ ಸೇರುತ್ತಿದ್ದೇನೆಯೇ ಹೊರತು ಯಾವುದೇ ಅಧಿಕಾರದ ಆಸೆ ಆಕಾಂಕ್ಷೆಯಿಂದಲ್ಲ. ಸ್ವಾಭಿಮಾನವಿರುವ ಯಾವುದೇ ವ್ಯಕ್ತಿ ಜೆಡಿಎಸ್ನಲ್ಲಿ ಉಳಿಯಲು ಸಾಧ್ಯವಿಲ್ಲವೆಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜೀಗೆರೆ ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಿವಶಂಕರಸ್ವಾಮಿ ಅಬ್ದುಲ್ ಜಮೀಲ್ ಹಾಗೂ ಇನ್ನಿತರೆ ಮುಖಂಡರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶಿವರಾಂ, ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯ್ಕುಮಾರ್, ಕೆಪಿಸಿಸಿ ಸದಸ್ಯ ಪಟೇಲ್ ಶಿವಪ್ಪ, ಮುಖಂಡರಾದ ದಂದೂರು ರವಿ, ಕಾಟೀಕೆರೆ ಸುನೀಲ್, ಜಿ.ಟಿ.ಎಸ್. ಗೌಸ್ಖಾನ್, ಶಫಿಅಹಮದ್, ರಘು, ಕೆ.ಕೆ. ಹುಸೇನ್ ಖಾನ್, ಬಷೀರ್, ಖಾದರ್, ಇತರರು ಇದ್ದರು.