ಪಿಯುಸಿ ಪರೀಕ್ಷೆ ಪ್ರಾರಂಭ
ಕ.ಪ್ರ.ವಾರ್ತೆ ್ಣ ಹಾಸನ ್ಣ ಮಾ. 13
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯಲ್ಲಿ ಬುಧವಾರದಿಂದ ಪ್ರಾರಂಭವಾಗಿದೆ.
ಮೊದಲ ದಿನವೇ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಇತಿಹಾಸ ಪತ್ರಿಕೆ ಪರೀಕ್ಷೆ ನಡೆಯಿತು. ವಿದ್ಯಾರ್ಥಿಗಳು ಮೊದಲ ದಿನವೇ ಬಹಳ ಉತ್ಸುಕರಾಗಿ ಪರೀಕ್ಷೆಯನ್ನು ಎದುರಿಸಿದರು.
ಜಿಲ್ಲೆಯಲ್ಲಿ 17,744 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 6,108 ಬಾಲಕರು, 8,250 ಬಾಲಕಿಯರು ಸೇರಿದಂತೆ ಒಟ್ಟು 14,358 ಮಂದಿ ಇದೇ ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಂಡಿದ್ದು, 2302 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 1084 ಮಂದಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಮಾ. 28ರವರೆಗೆ ಜಿಲ್ಲೆಯ ಒಟ್ಟು 36 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಒಟ್ಟು 17,744 ವಿದ್ಯಾರ್ಥಿಗಳಲ್ಲಿ 8732 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ, 4676 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಹಾಗೂ 4336 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ 3 ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಅಲ್ಲಿ ವಿಶೇಷ ನಿಗಾ ಇರಿಸಲು ಪದವಿ ಪೂರ್ವ ನಿರ್ದೇಶನಾಲಯದಿಂದ ವಿಶೇಷ ತಂಡ ನಿಯೋಜಿಸಲಾಗಿತ್ತು. ಈ ತಂಡ ಪರೀಕ್ಷಾ ಪ್ರಾರಂಭದಿಂದ ಮುಗಿಯುವವರೆಗೆ ಪರೀಕ್ಷಾ ಕೇಂದ್ರದಲ್ಲೇ ಇದ್ದು, ಎಲ್ಲ ವಿಚಾರಗಳನ್ನು ಗಮನ ಹರಿಸಿ ಯಾವುದೇ ರೀತಿಯ ಗೊಂದಲ ಹಾಗೂ ನಖಲು ಉತ್ತರ ಪತ್ರಿಕೆಗಳನ್ನು ಮಾಡದಂತೆ ಎಚ್ಚರವಹಿಸಿದ್ದರು.