25 ರಂದು ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸಿದ್ಧತೆ ಕುರಿತು ಪೂರ್ವಭಾವಿ ಸಭೆ
ಕ.ಪ್ರ.ವಾರ್ತೆ ಹೊಳೆನರಸೀಪುರ ಮಾ.14
ಪಟ್ಟಣದ ಪುರದೈವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಇದೇ ಮಾ.25ರಂದು ನಡೆಯಲಿದ್ದು, ರಥೋತ್ಸವ ಸಿದ್ದತೆಗಳ ಕುರಿತಂತೆ ದೇವಾಲಯ ಆವರಣದಲ್ಲಿ ಜನಪ್ರತಿನಿಧಿಗಳು ಹಾಗೂ ನಾಗರಿಕರ ಸಮ್ಮುಖದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದರು.
ರಥೋತ್ಸವ ಆಚರಣೆಯ ಕುರಿತಂತೆ ಪ್ರಮುಖವಾಗಿ ಬ್ರಹ್ಮರಥವನ್ನು ಪಾರಂಪರಿಕವಾಗಿ ಸಿದ್ದಗೊಳಿಸುವ ಬಗ್ಗೆ, ರಥದ ಭದ್ರತೆಯ ದೃಷ್ಟಿಯಿಂದ ಹೊಸದಾಗಿ ಮರ,ಮುಟ್ಟುಗಳನ್ನು ರಥದ ಗೋಪುರದ ನಿರ್ಮಾಣಕ್ಕಾಗಿ ಸಿದ್ದಗೊಳಿಸಲು ತೀರ್ಮಾನಿಸಲಾಯಿತು. ರಥೋತ್ಸವ ಹಾಗೂ ಹಿಂದಿನ ದಿನಗಳಲ್ಲಿ ಆರಂಭಗೊಳ್ಳುವ ನಾನಾ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಹಾಗೂ ನಿಷ್ಠೆಯಿಂದ ಕೈಗೊಳ್ಳಲು ತೀರ್ಮಾನಿಸಲಾಯಿತು.
ರಥೋತ್ಸವದಂದು ಹೊರಗಿನಿಂದ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ತೀರ್ಮಾನಿಸಿದ ಸಭೆ, ಇದಕ್ಕೆ ಸಂಬಂಧಿಸಿದಂತೆ ಪೂಜಾ ಕಾರ್ಯಗಳಲ್ಲಿ ಯಾವುದೇ ಲೋಪಗಳೂ ನುಸುಳದಂತೆ ಎಚ್ಚರಿಕೆ ವಹಿಸಲು ಹಾಗೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಸೂಕ್ತ ಪೊಲೀಸ್ ಬಂದೋಬಸ್ತ್
ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಲ್ಲಿ ಕೋರಲಾಯಿತು.
ಜಾತ್ರಾ ಮಹೋತ್ಸವ ವಿಜೃಂಭಣೆ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಪುರಸಭೆಯ ಆಡಳಿತ ಹಾಗೂ ಸದಸ್ಯರ ಸಂಪೂರ್ಣ ಸಹಕಾರ ಕೋರಲಾಯಿತು. ಜಾತ್ರಾ ಮಹೋತ್ಸವ ಆಚರಣೆಯ ಕುರಿತಂತೆ ಹೆಚ್ಚಿನ ಪ್ರಚಾರ ನೀಡಿ ಪಟ್ಟಣವನ್ನು ಅಲಂಕರಿಸಲು ಸಭೆ ತೀರ್ಮಾನಿನಿಸಿತು.
ಉಪತಹಸೀಲ್ದಾರ್ ವಸಂತಕುಮಾರ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್, ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲನಾಯಕ್, ನಗರ ಠಾಣೆ ಎಸ್ಸೈ ಶಿವಕುಮಾರ್, ಪುರಸಭೆ ನೂತನ ಸದಸ್ಯ ಎಚ್.ವಿ.ಪುಟ್ಟರಾಜು, ಎಚ್.ವಿ.ಸುರೇಶ್, ಸುಮಿತ್ರಾದೇವಿ, ತುಳಸಿ, ಶೋಭ, ಜಯಕಾಂತಮ್ಮ, ಸರಸ್ವತಿ ಇತರರು ಇದ್ದರು.