6 ತಿಂಗಳಿಂದ ಹಣ ಬಿಡುಗಡೆಯಿಲ್ಲ: ವಸತಿ ಫಲಾನುಭವಿಗಳ ದೂರು
ಸಕಲೇಶಪುರ: ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮುಂದಾಗಿರುವ ಫಲಾನುಭವಿಗಳಿಗೆ ಕಳೆದ ಆರು ತಿಂಗಳಿನಿಂದ ಹಣ ಬಿಡುಗಡೆ ಮಾಡದೆ ತೊಂದರೆ ನೀಡಲಾಗುತ್ತಿದೆ ಎಂದು ಬಸವ ವಸತಿ ಯೋಜನೆಯ ಫಲಾನುಭವಿಗಳು ದೂರಿದ್ದಾರೆ.
ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 30 ಫಲಾನುಭವಿಗಳು ಈ ಯೋಜನೆಯಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದು ಕೈಸಾಲ ಮಾಡಿ ಈಗಾಗಲೇ ಬಹುತೇಕ ಫಲಾನುಭವಿಗಳು ಮನೆಗೆ ತಳಪಾಯ ನಿರ್ಮಿಸಿದ್ದರೇ ಕೆಲವು ಫಲಾನುಭವಿಗಳು ಗೋಡೆ ನಿರ್ಮಿದ್ದಾರೆ.
ಆದರೆ ಒಟ್ಟು ನಾಲ್ಕುಹಂತಗಳಲ್ಲಿ ಹಣ ಬಿಡುಗಡೆಮಾಡ ಬೇಕಿರುವ ತಾಪಂ ಆಡಳಿತ ಇದುವರಗೆ ಯಾವುದೇ ಹಣ ಬಿಡುಗಡೆ ಮಾಡದೆ ನಿರ್ಲಕ್ಷ್ಯತೆ ತೋರಿದೆ ಎಂದು ಆರೋಪಿಸಿದ್ದಾರೆ.
ಹಣ ಬಿಡುಗಡೆ ಮಾಡುವಂತೆ ಯೋಜನೆಯ ನ್ಯೂಡಲ್ ಅಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಕಳೆದ ಆರು ತಿಂಗಳಿನಿಂದ ನಿರ್ಲಕ್ಷದ ಉತ್ತರ ನೀಡುತ್ತಿದ್ದಾರೆ.
ಶೀಘ್ರವೇ ಮನೆಗಳು ಸಂಪೂರ್ಣಗೊಳ್ಳದಿದ್ದರೆ ಮಳೆಗೆ ಗೋಡೆಗಳು ಬಿದ್ದು ಹಾಳಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಕೂಡಲೇ ಹಣ ಬಿಡುಗಡೆಮಾಡ ಬೇಕು ತಪ್ಪಿದಲ್ಲಿ ಬ್ಯಾಕರವಳ್ಳಿ ಗ್ರಾಪಂ ಸದಸ್ಯರ ನೇತೃತ್ವದಲ್ಲಿ ತಾಪಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.