ಅಂದು ಮಹಿಳೆಯರಿಗೆ ದೇವತೆಯ ಸ್ಥಾನ, ಇಂದು ದೌರ್ಜನ್ಯ: ವಿಷಾದ
ಕ.ಪ್ರ.ವಾರ್ತೆ ಹಾಸನ ಮಾ.14
ಪ್ರಾಚೀನ ಭಾರತದಲ್ಲಿ ಮಹಿಳೆಯರನ್ನು ದೇವರು, ದೇವತೆಯ ಸ್ಥಾನದಲ್ಲಿ ಇಟ್ಟಿದ್ದರು. ಆದರೆ ಇಂದು ಮಹಿಳೆಯನ್ನು ದೌರ್ಜನ್ಯಕ್ಕೆ ಒಳಪಡಿಸಿರುವುದು ವಿಷಾದನೀಯ ಸಂಗತಿ ಎಂದು ಸರ್ಕಾರಿ ಕಲಾ ಕಾಲೇಜಿನ ಡಾ. ವಿ.ಸುನೀತಾ ತಿಳಿಸಿದರು.
ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜು, ಸಮಾಜಶಾಸ್ತ್ರ ವಿಭಾಗದಿಂದ ಮಹಿಳಾ ಅಧ್ಯಯನ ವಿಷಯ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡುತ್ತಿದ್ದರು. ಭಾರತದಂಥ ಸುಸಂಸ್ಕೃತ ದೇಶದಲ್ಲಿ ಸಾಂಪ್ರದಾಯಿಕ ನಂಬಿಕೆಗಳು, ಪುರುಷ ಪ್ರಧಾನ ಶೈಲಿ ಹಾಸುಹೊಕ್ಕಾಗಿದೆ. ಮಹಿಳೆಯರನ್ನು ಲಿಂಗ ತಾರತಮ್ಯ, ಅಗೌರವ ಮತ್ತು ಕಾಮದ ದೃಷ್ಟಿಯಿಂದ ಕಾಣಲಾಗುತ್ತಿದೆ. ಇದು ಶೋಷಣೆಯ ಪರಾಕಾಷ್ಠೆ. ಇಂತಹ ಕೃತ್ಯಗಳ ವಿರುದ್ಧ ಮಹಿಳೆಯರು ಪ್ರತಿಭಟಿಸಬೇಕು ಎಂದ ಅವರು,
ಮಹಿಳೆಯರಿಗೆ ಉದ್ಯೋಗ, ರಾಜಕೀಯದಲ್ಲಿ ಬಡ್ತಿ ನೀಡುವಲ್ಲಿ, ಕಾನೂನಿನಲ್ಲಿ ಸಮಾನತೆ ದೊರಕಬೇಕು ಎಂದು ನುಡಿದರು.
ವಿದ್ಯಾರ್ಥಿಗಳೇ ನಿಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಿ ಶಿಕ್ಷಣವನ್ನೇ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಳ್ಳಿ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಶ್ಯಾಮಭಟ್ ಮಾತನಾಡಿ, ಮಹಿಳೆಯರು ಸ್ವಂತಿಕೆ ಹಾಗೂ ಸ್ವಾಭಿಮಾನದಿಂದ ಬದುಕುವ ಮನೋಭಾವನೆ ರೂಢಿಸಿಕೊಳ್ಳಬೇಕೆಂದು ಎಂದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಿ.ತಿಮ್ಮಪ್ಪಗೌಡ ಹಾಗೂ ಉಪನ್ಯಾಸಕಿ ಡಿ.ಸಿ.ಪುಷ್ಪಾವತಿ ಉಪಸ್ಥಿರಿದ್ದರು. ವಿದ್ಯಾರ್ಥಿ ಮಧು ನಿರೂಪಿಸಿದರು. ಸುಮಿತ್ರ ಪ್ರಾರ್ಥನೆ, ಸುಷ್ಮಾ ಸ್ವಾಗತಿಸಿದರು. ಚೈತ್ರ ವಂದಿಸಿದರು.