ಇಂದಿನಿಂದ ಹಾಲು ಖರೀದಿ ದರ 2 ರು. ಹೆಚ್ಚಳ: ರೇವಣ್ಣ
ಕನ್ನಡಪ್ರಭವಾರ್ತೆ ಹಾಸನ ಮಾ 14
ಹಾಲು ಖರೀದಿ ದರವನ್ನು ಮಾ.15ರಿಂದ ಪ್ರತಿ ಲೀಟರ್‌ಗೆ 2 ರು.ನಂತೆ ಹೆಚ್ಚಿಸಲಾಗಿದೆ ಎಂದು ಜೆಡಿಎಲ್‌ಪಿ ನಾಯಕ ಹಾಗೂ ಹಾಸನ ಹಾಲು ಒಕ್ಕೂಟ ಅಧ್ಯಕ್ಷ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು 13ರಂದು ಹಾಲು ಉತ್ಪಾದಕರಿಂದ 2 ರು.ಗಳಂತೆ ಹೆಚ್ಚಿನ ದರದಲ್ಲಿ ಖರೀಸಲಾಗಿತ್ತು. ಅದೇ ರೀತಿ ಈ ತಿಂಗಳಲ್ಲಿ ಮತ್ತೆ 2 ರು.ಗಳ ಹಾಲು ಖರೀದಿ ದರವನ್ನು ಹೆಚ್ಚಿಸುವ ಮೂಲಕ 69,500 ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಂಘಗಳಿಂದ ಉತ್ಪಾದರಿಗೆ (ಕನಿಷ್ಠ ಶೇ.1.5 ಜಿಡ್ಡು ಮತ್ತು ಶೇ.8.5 ಘನಾಂಶವಿರುವ ಉತ್ತಮ ಗುಣಮಟ್ಟದ ಹಾಲು ಪ್ರತಿ ಲೀ.) 22.50 ರು. ಮತ್ತು ಒಕ್ಕೂಟದಿಂದ ಸಂಘಗಳಿಗೆ 23.06 ರು. ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 19.50 ರು. ಕೋಲಾರದಲ್ಲಿ 20 ರು. ಮೈಸೂರಿನಲ್ಲಿ 20 ರು. ಮಂಡ್ಯದಲ್ಲಿ 19.50 ರು. ತುಮಕೂರಿನಲ್ಲಿ 19 ರು. ಶಿವಮೊಗ್ಗದಲ್ಲಿ 20.25 ರು. ದಕ್ಷಿಣ ಕನ್ನಡದಲ್ಲಿ 24.50 ರು. ನೀಡಲಾಗುತ್ತಿದೆ.
ದಕ್ಷಿಣ ಕನ್ನಡ ಬಿಟ್ಟರೆ ನಂತರ ಜಿಲ್ಲೆಯಲ್ಲಿ ಹೆಚ್ಚಿನ ದರವನ್ನು ಹಾಲು ಉತ್ಪಾದರಿಕೆ ನೀಡಲಾಗುತ್ತಿದೆ. ಕಳೆದ 3 ತಿಂಗಳಿನಿಂದ ಒಕ್ಕೂಟದ ಹಾಲು ಶೇಖರಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ 2012-13ನೇ ಸಾಲಿನ ಹಾಲು ಶೇಖರಣೆಯನ್ನು 2011-12ನೇ ಸಾಲಿನ ಹಾಲು ಶೇಖರಣೆಗೆ ಹೋಲಿಸಿದಾಗ ಶೇ.14ರಷ್ಟು ಬೆಳವಣಿಗೆಯಾಗಿದೆ ಎಂದರು.
ಪ್ರತಿನಿತ್ಯ 5,41,941 ಲೀ. ಹಾಲು ಶೇಖರಣೆ: ಪ್ರಸ್ತುತ ಪ್ರತಿನಿತ್ಯ 5,41,941 ಲೀಟರು ಹಾಲು ಶೇಖರಣೆಯಾಗುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಒಕ್ಕೂಟವು 3 ಕೋಟಿ ರು.ಗಳಷ್ಟು ನಿವ್ವಳ ಲಾಭಗಳಿಸುವ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ 21.53 ಕೋಟಿ ರು., ಕೋಲಾರದಲ್ಲಿ 25.81 ಕೋಟಿ ರು., ಮೈಸೂರಿನಲ್ಲಿ 5.37 ಕೋಟಿ ರು., ಮಂಡ್ಯದಲ್ಲಿ 4.70 ಕೋಟಿ ರು., ಬೆಳಗಾಂ 15 ಕೋಟಿ ರು., ತುಮಕೂರು 5.27 ಕೋಟಿ ರು., ಬಳ್ಳಾರಿ 1.22 ಕೋಟಿರು.ಗಳ ನಷ್ಟದಲ್ಲಿದೆ. ಆದರೆ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸ್ವಲ್ಪಮಟ್ಟಿಗೆ ಲಾಭದಾಯಕವಾಗಿದೆ ಎಂದು ವಿವರಿಸಿದರು.
2013-14ನೇ ಸಾಲಿನಿಂದ 4 ವರ್ಷಗಳ ಅವಧಿಗೆ ಭಾರತ ಸರ್ಕಾರ ನ್ಯಾಷನಲ್ ಡೈರಿ ಪ್ಲಾನ್ ಯೋಜನೆಯಡಿ ಒಕ್ಕೂಟ ವ್ಯಾಪ್ತಿಯ ಸಂಘಗಳ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹಣ ಮಂಜೂರು ಮಾಡಿದ್ದು, ಈ ಪೈಕಿ 5.10 ಲಕ್ಷ ರು.ಅನುದಾನವಾಗಿದ್ದು, 1.82 ಲಕ್ಷ ರು. ಒಕ್ಕೂಟದ ಪಾಲು ಹಾಗೂ ಸಂಘಗಳು ಭರಿಸಬೇಕಾಗಿದೆ. ಈ ಯೋಜನೆಯಡಿ ಒಟ್ಟು 91 ಹೊಸ ಸಂಘಗಳನ್ನು, 20 ಬಿಎಂಸಿ ಗಳನ್ನು ಮತ್ತು 243 ಡಿಪಿಎಂಸಿ ಯೂನಿಟ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಈ ಯೋಜನೆಯನ್ನು ಎನ್‌ಡಿಡಿಬಿ ಯ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.