ಪ್ರೇಕ್ಷಕರ ಮನಸ್ಸು ಸೂರೆಗೊಂಡ ನಾಟಕೋತ್ಸವ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಮಾ.14
ಇಲ್ಲಿನ ಜನಪದ ರಂಗಮಾಧ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಮೂರು ದಿನಗಳು ಜರುಗಿದ ನಾಟಕೋತ್ಸವ ಜನರ ಮನಸ್ಸನ್ನು ಅಪಾರವಾಗಿ ಸೂರೆಗೊಂಡಿತು.
ಇಂದಿನ ದೃಶ್ಯ ಮಾಧ್ಯಮದ ಧಾರಾವಾಹಿಗಳಿಗೆ ದಾಸರಾಗಿರುವ ಜನತೆ ನಾಟಕಗಳನ್ನು ತಿರಸ್ಕರಿಸುತ್ತಿದ್ದಾರೆಂಬ ಹಲವರ ಮಾತಿಗೆ ಈ ನಾಟಕೋತ್ಸವ ವಿರುದ್ಧವಾಗಿತ್ತು. ಧಾರಾವಾಹಿಗಳ ಮಧ್ಯೆ ಬರುವ ಜಾಹಿರಾತುಗಳಿಂದ ಬೇಸತ್ತಿದ್ದ ಜನತೆ ನಾಟಕದ ಸಾರವನ್ನು ನೋಡಿ ಆನಂದಿಸಿದರು. ಡಾ.ಚಂದ್ರು ಕಾಳೇನಹಳ್ಳಿ ನೇತೃತ್ವದಲ್ಲಿ ಮೂರು ದಿನ ಪ್ರದರ್ಶನಗೊಂಡ ನಾಲ್ಕು ನಾಟಕಗಳಲ್ಲಿನ ಕಲಾವಿದರ ನಟನೆ ಹಾಗೂ ಕಥೆಗಳಲ್ಲಿನ ಘಟನೆಗಳನ್ನು ಅರಿತ ಜನತೆ ನಾಟಕಗಳನ್ನು ನೋಡುವ ಹಂಬಲ ಬೆಳಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರು ದಿನಗಳಲ್ಲಿಯೂ ಪ್ರದರ್ಶನಗೊಂಡ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ಶಿವಸಂಚಾರ ನಾಟಕ ತಂಡದ ವತಿಯಿಂದ ಸಾಮಾಜಿಕ ನಾಟಕ ಕಳ್ಳರೋ ಬಲುಗಳ್ಳರೋ ಆರಂಭದ ದಿನವೋ ಜನತೆಯ ಮನಸ್ಸನ್ನು ಸೂರೆಗೊಂಡ ಹಿನ್ನೆಲೆಯಲ್ಲಿ ಎರಡನೇ ದಿನ ಪ್ರದರ್ಶನಗೊಂಡ ಸೂಳೆ ಸನ್ಯಾಸಿ ಹಾಗೂ ಕಡೆಯ ದಿನ ಪ್ರದರ್ಶನಗೊಂಡ ಸದಾರಮೆ ನಾಟಕಗಳು ಜನತೆಯ ಮನಸ್ಸನ್ನು ಸೂರೆಗೊಂಡಿತು. ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರೇಕ್ಷಕರಿಗೆ ಹಾಕಿದ್ದ ಕುರ್ಚಿಗಳು ಭರ್ತಿಯಾಗಿ ಪ್ರೇಕ್ಷಕರು ನಿಂತುಕೊಂಡೇ ನಾಟಕಗಳನ್ನು ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.