ಅಸೆಂಬ್ಲಿ ಚುನಾವಣೆ: ಸಿದ್ಧತೆಗೆ ತಾಕೀತು
ಕ.ಪ್ರ. ವಾರ್ತೆ ಹಾಸನ ಮಾ.15
ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಲಕ್ಷಣಗಳು ಕಾಣುತ್ತಿದ್ದು, ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಶುಕ್ರವಾರ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ, ಜಿಪಂ ಸಿಇಓ ಮತ್ತಿತರ ಇಲಾಖೆಗಳ ಉನ್ನತಾಧಿಕಾರಿಗಳೊಡನೆ ವಿಡಿಯೋ ಕಾನ್ಫರೆನ್ ಮೂಲಕ ಸಮಾಲೋಚನೆ ನಡೆಸಿ, ಚುನಾವಣೆಗೆ ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಡಿಯೋ ಕಾನ್ಫಿಯರೆನ್ಸ್ನಲ್ಲಿ ಜಿಲ್ಲಾ ಅಧಿಕಾರಿಗಳೊಡನೆ ಮಾತನಾಡಿದ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಅನಿಲ್ಕುಮಾರ್ ಝಾ ಅವರು, ಈಗಿನಿಂದಲೇ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳ ಬೇಕೆಂದರು.
ಹಾಲಿ ಜಿಲ್ಲಾವಾರು ವಿಧಾನಸಭಾ ಚುನಾವಣೆಗೆ ಆಗಿರುವ ಸಿದ್ಧತೆಗಳು, ಕಾನೂನು ಸುವ್ಯವಸ್ಥೆ, ಮತದಾರರ ನೊಂದಣಿ, ಭಾವಚಿತ್ರವಿರುವ ಮತದಾರರ ಪಟ್ಟಿಯ ಪರಿಷ್ಕರಣೆ, ಮತ್ತಿತರ ವಿಷಯಗಳ ಕುರಿತು ಮಾಹಿತಿ ಪಡೆದು ಸಲಹೆಗಳನ್ನು ನೀಡಿದರು.
ಹಕ್ಕಿನಿಂದ ವಂಚಿತರಾಗಬಾರದು: ಮತದಾನ ಪ್ರತಿಯೊಬ್ಬರ ಹಕ್ಕು, ಯಾರೇ ಆಗಲಿ ಈ ಹಕ್ಕಿನಿಂದ ವಂಚಿತರಾಗಬಾರದು ಚುನಾವಣೆ ಕರ್ತವ್ಯ ದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೊಡಗುವ ಎಲ್ಲಾ ಪೊಲೀಸ್ ಹಾಗೂ ವಿವಿಧ ಇಲಾಖಾ ಸಿಬ್ಬಂದಿಗಳೂ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಅಲ್ಲದೆ ಮತದಾರರ ಪಟ್ಟಿಯನ್ನು ಅತ್ಯಂತ ಜಾಗರೂಕತೆಯಿಂದ ಪರಿಷ್ಕರಿಸಬೇಕು. ಈ ಪಟ್ಟಿಯಿಂದ ಹೊರಗುಳಿದಿರುವವರಿಗೆ ಜಾಗೃತಿ ಮೂಡಿಸಿ ಸೇರ್ಪಡೆಗೊಳಿಸಬೇಕು ಎಂದು ಅವರು ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಂದೇ ಮತಗಟ್ಟೆ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬರುವ ಅಜರ್ಗಳು ಮತ್ತು ಅಧಿಕ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಪ್ರಕರಣಗಳನ್ನು ಅತ್ಯಂತ ಜಾಗರೂಕತೆಯಿಂದ ಗಮನಿಸಬೇಕು. ಅದರಲ್ಲೂ ವಿಶೇಷವಾಗಿ ಕೊಳಗೇರಿ ನಿವಾಸಿಗಳು, ಅಲ್ಪಸಂಖ್ಯಾತ ಮತದಾರರ ವಿಚಾರದಲ್ಲಿ ಇಂತಹ ಪ್ರಕರಣಗಳು ನಡೆದಿದ್ದಲ್ಲಿ ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಅವರು ಸಲಹೆ ನೀಡಿದರು.
ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಮತದಾನದ ಪ್ರಾಮುಖ್ಯತೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ವಿಧಾನಗಳು, ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುವವರಿಗೆ ಅರಿವು ಮೂಡಿಸುವುದು ಸೇರಿದಂತೆ ಒಟ್ಟಾರೆ ಚುನಾವಣೆಗೆ ಪೂರಕವಾಗಿ ಹೊಂದಿಸಲು ಮತದಾರರನ್ನು ಸಿದ್ಧಪಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ವಾರಂಟ್ ಇರುವವರ ಬಗ್ಗೆ ಕ್ರಮ: ಜಿಲ್ಲಾ ಎಸ್ಪಿ ಅಮಿತ್ಸಿಂಗ್ ಮಾತನಾಡಿ, ಜಿಲ್ಲೆಯಲ್ಲಿನ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಜಾಮೀನು ರಹಿತ ವಾರಂಟ್ ಇರುವವರ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಚುನಾವಣಾ ಆಯೋಗದ ವಿಶೇಷ ಕರ್ತವ್ಯಾಧಿಕಾರಿ ಪಂಕಜ್ ಪಾಂಡೆ, ಜಂಟಿ ಚುನಾವಣಾ ಅಯುಕ್ತ ಟಿ. ಶಾಮಯ್ಯ, ಉಪ ಚುನಾವಣಾ ಆಯುಕ್ತ ಕುಲಕರ್ಣಿ, ಮತದಾರರ ಪಟ್ಟಿ ಪರಿಷ್ಕರಣೆ ಮೇಲ್ವಿಚಾರಣೆ ಅಧಿಕಾರಿ ರಮೇಶ್, ತರಬೇತಿ ಸಾಮಗ್ರಿ, ವಿತರಣೆ ಮೇಲ್ವಿಚಾರಣೆ ವಹಿಸುತ್ತಿರುವ ಜಿಯಾಉಲ್ಲಾ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯ ವಿಶೇಷ ಕರ್ತವ್ಯಾಧಿಕಾರಿ ಕೆ.ಎಸ್. ಬೇವಿನಮರದ ಅವರು ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಚ್. ನಾಗರಾಜ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ಶ್ರೀವಿದ್ಯಾ, ಜಗದೀಶ್, ತಾಲೂಕು ತಹಸೀಲ್ದಾರರು, ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಮುಂಬರುವ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಲು ಎಲ್ಲಾ ಇಲಾಖಾ ಅಧಿಕಾರಿ, ಸಿಬ್ಬಂದಿ ಸಿದ್ಧರಾಗಬೇಕು, ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಎಲ್ಲಾ ಮತದಾರರಿಗೂ ದೊರಕಿಸುವ ಪ್ರಯತ್ನ ಚುರುಕಾಗಬೇಕು. ಅಬಕಾರಿ ಅಕ್ರಮ ಪ್ರಕರಣಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದರು. ಚುನಾವಣೆ ಸಿದ್ಧತೆ ಬಗ್ಗೆ ನಿರಂತರವಾಗಿ ಸಭೆಗಳನ್ನು ನಡೆಸಿ ಎಲ್ಲಾ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ ಅವರು ಚುನಾವಣಾ ಕರ್ತವ್ಯದಲ್ಲಿ ಲೋಪವೆಸಗುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮತದಾರರ ಜಾಗೃತಿ ಸಲುವಾಗಿ
ಎಲ್ಲಾ ಮತದಾರರು ಸಕ್ರಿಯವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜಾಗೃತಿ ಮೂಡಿಸುವ ಸಲುವಾಗಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಜಿಲ್ಲಾ ವಾರ್ತಾಧಿಕಾರಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಾನಾ ಇಲಾಖೆಗಳ ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆ. ಸಮಿತಿಯು ನಾನಾ ರೀತಿಯ ಮಾಧ್ಯಮಗಳನ್ನು ಬಳಸಿಕೊಂಡು ಮತದಾರರ ಜಾಗೃತಿಗೆ ಕ್ರಮ ವಹಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿಯವರು ಮಾಧ್ಯಮಗಳಿಗೆ ಚುನಾವಣಾ ಸಿದ್ಧತೆಗಳ ಪ್ರಕ್ರಿಯೆ ಬಗ್ಗೆ ನಿರಂತರವಾಗಿ ಸುದ್ಧಿ ಮಾಧ್ಯಮಗಳ ಮೂಲಕ ಪ್ರಚಾರ ನೀಡಬೇಕು ಎಂದು ಅವರು ತಿಳಿಸಿದರು. ಚುನಾವಣಾ ಖರ್ಚು ವೆಚ್ಚಗಳ ಬಗ್ಗೆ ವಿಶೇಷ ನಿಗಾ ವಹಿಸಲು ಲೆಕ್ಕಪತ್ರಗಳ ನೋಡಲ್ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ. ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಈ ಕಾರ್ಯಕ್ಕೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದ ಅನಿಲ್ಕುಮಾರ್ ಝಾ ಪ್ರತಿ ಮದ್ಯದಂಗಡಿಗಳಲ್ಲಿ ಮಾರಾಟದ ದೈನಂದಿನ ವಿವರಗಳನ್ನು ನಿಖರವಾಗಿ ಪಡೆಯುವುದು ಅಗತ್ಯ ಎಂದು ಹೇಳಿದರು.
ಮಾಹಿತಿ ನೀಡಿದ ಡಿಸಿ
ಜಿಲ್ಲೆಯಲ್ಲಿನ ಚುನಾವಣಾ ತಯಾರಿ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೋಹನರಾಜ್ ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಹಾಗೂ 18 ವರ್ಷ ಮೇಲ್ಪಟ್ಟು ಇನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳದಿರುವವರನ್ನು ಹೊಸದಾಗಿ ಸೇರಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಮುಕ್ತಾಯಗೊಂಡ ನಗರ, ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಅತ್ಯಂತ ಕನಿಷ್ಠ ಮತದಾನ ಆಗಿರುವ ಬೂತ್ಗಳ ಬಗ್ಗೆ ವಿಶೇಷ ಗಮನ ಹರಿಸಿ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಈಗಾಗಲೇ 7 ವಿಧಾನ ಸಭಾ ಕ್ಷೇತ್ರಗಳಿಗೂ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಾಲಕಾಲಕ್ಕೆ ಚುನಾವಣಾ ಆಯೋಗದಿಂದ ಬರುವ ಸೂಚನೆ, ನಿರ್ದೇಶನಗಳಂತೆ ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದರು.