ಎಂಜಿನಿಯರ್ ವಿರುದ್ಧ ಪ್ರತಿಭಟನೆ
ಕನ್ನಡಪ್ರಭವಾರ್ತೆ ಬೇಲೂರು ಮಾ.15
ಕುಡಿಯುವ ನೀರಿನ ವಿತರಣೆ ಬಗ್ಗೆ ಉಡಾಫೆ ಉತ್ತರ ನೀಡಿದ ಮುಖ್ಯ ಎಂಜನಿಯರ್ರನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.
ಇಲ್ಲಿನ ಶಿವಜ್ಯೋತಿ ಫಣ ಬಡಾವಣೆಯಲ್ಲಿರುವ ಪುರಸಭೆ ಅಧಿಕಾರಿಯೊಬ್ಬರ ಸಂಬಂಧಿಕರ ಮನೆಗೆ ಪುರಸಭೆ ಟ್ಯಾಂಕರ್ ಮೂಲಕ ನೀರನ್ನು ದಿನನಿತ್ಯ ಸರಬರಾಜು ಮಾಡಲಾಗುತ್ತಿತ್ತು. ಇದನ್ನು ಕಂಡ ನಿವಾಸಿಗಳು ಟ್ಯಾಂಕರ್ ಹಿಡಿದು ಪ್ರತಿಭಟನೆ ಕುಳಿತರು. ಪೊಲೀಸರು ಬಂದು ಪ್ರತಿಭಟನೆ ಹಿಂತೆಗೆಯಲು ಸೂಚಿಸಿದಾಗ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯ ಎಂಜನಿಯರ್ ಶಿವಪ್ರಸಾದ್ಗೆ ಕುಡಿಯುವ ನೀರನ್ನು ಟ್ಯಾಂಕರ್ನಲ್ಲಿ ಕೇವಲ ಒಂದು ಮನೆಗೆ ಮಾತ್ರ ಕೊಡುತ್ತಿರುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರು. ಆದರೆ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಅಧಿಕಾರಿ, ನನಗೆ ಇದೊಂದೆ ಕೆಲಸ ಇಲ್ಲ, 23 ವಾರ್ಡುಗಳನ್ನು ನೋಡಬೇಕು, ಯಾರು ನೀರು ತರುತ್ತಾರೆ, ಕೊಡುತ್ತಾರೆ ಎಂದು ನೋಡುವುದು ನನ್ನ ಕೆಲಸವಲ್ಲ ಎಂದು ಉಡಾಫೆ ಉತ್ತರ ನೀಡಿದರು.
ಇದರಿಂದ ಕುಪಿತರಾದ ನಿವಾಸಿಗಳು ಮುಖ್ಯ ಎಂಜನಿಯರ್ ಅವರನ್ನು ತರಾಟೆ ತೆಗೆದುಕೊಂಡಾಗ ಕೆಲ ಕಾಲ ವಾಗ್ವಾದ ಉಂಟಾಗಿ ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಮುಖ್ಯ ಎಂಜನಿಯರ್ ಸ್ಥಳದಿಂದ ಹೊರ ನಡೆಯಬೇಕಾಯಿತು.
ಬಡಾವಣೆಯಲ್ಲಿ ಕುಡಿಯುವ ನೀರಿಗೆ ತುಂಬಾ ಕಷ್ಟವಿರುವಾಗ ಕೇವಲ ಒಂದು ಮನೆಗೆ ಒಂದು ಟ್ಯಾಂಕರ್ ನೀರನ್ನು ಕೊಡುತ್ತಿರುವ ಬಗ್ಗೆ ಬಡಾವಣೆಯ ನಿವಾಸಿಗಳಲ್ಲಿ ಅಸಮಾಧಾನವಿತ್ತು. 2 ದಿನಗಳ ಹಿಂದೆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿ ಸಮರ್ಪಕ ಕುಡಿವ ನೀರು ಪೂರೈಸುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಸ್ಪಂದಿಸದ ಅಧಿಕಾರಿಗಳು ಪಟ್ಟಣಕ್ಕೆ ಕುಡಿಯಲು ನೀರಿಲ್ಲ ನಿಮಗೆ ಕೊಡುವುದು ಹೇಗೆ ಎಂದಿದ್ದಾರೆ.
ಕನಿಷ್ಠ ಬಡಾವಣೆಗೆ ಟ್ಯಾಂಕರ್ ಮೂಲಕ ನೀರನ್ನು ಕಳುಹಿಸಿದರೆ ಉಪಕಾರವಾಗುತ್ತದೆ ಎಂದು ಮನವಿ ಮಾಡಿದಾಗ ಪುರಸಭೆಯಲ್ಲಿ ಟ್ಯಾಂಕರ್ ಇಲ್ಲ, ಅಲ್ಲದೆ ನೀರೂ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ಪುರಸಭೆ ಅಧಿಕಾರಿಯ ಸಂಬಂಧಿಕರ ಮನೆಗೆ ಟ್ಯಾಂಕರ್ನಲ್ಲಿ ನೀರು ಕೊಡಲು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಮುಖ್ಯ ಎಂಜನಿಯರ್ ಶಿವಪ್ರಸಾದ್ ಉಡಾಫೆ ಉತ್ತರ ನೀಡುತ್ತಾರೆ. ಬಡವರಿಗೊಂದು ನ್ಯಾಯವಾದರೆ ಬಲ್ಲಿದರಿಗೊಂದು ನ್ಯಾಯ ಎನ್ನುವಂತಾಗಿದ್ದು ಮುಂದೆಯೂ ಇದೇ ರೀತಿಯಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಆದಿಲ್, ಕುಮಾರ್, ಲಲಿತಮ್ಮ, ಬಸವರಾಜು, ಸೀನಾ ಇನ್ನಿತರರು ಇದ್ದರು.