ಬಾಲ್ಯವಿವಾಹ ಬಿಡಿ, ವಿಧವಾ ವಿವಾಹ ಪ್ರೋತ್ಸಾಹಿಸಿ: ಶಾಹಿದಾ ಬೇಗಂ
ಕ.ಪ್ರ.ವಾರ್ತೆ ಹಾಸನ ಮಾ. 15
ಸಮಾಜದಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ತೊಡೆದು ಹಾಕಬೇಕು, ಹಾಗೆಯೇ ವಿಧವಾ ವಿವಾಹವನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ ಶಾಹಿದಾ ಬೇಗಂ ತಿಳಿಸಿದರು.
ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ನಿರ್ಮೂಲನ ಘಟಕದಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಸಾಧಕ ಮಹಿಳೆಯರನ್ನು ಗುರುತಿಸಿ ಅವರನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನ್ಯಾಯಾವಾದಿ ಗಿರಿಜಾಂಬಿಕೆ ಮಾತನಾಡಿ ಸಂವಿಧಾನದಲ್ಲಿ ಅಳವಡಿಸಿರುವ ಮಹಿಳಾ ಪರ ಕಾಯ್ದೆಗಳನ್ನು ಸಂಪೂರ್ಣವಾಗಿ ಅನುಷ್ಠಾನ ಗೊಳಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ವಿಷಾದ ವ್ಯಕ್ತಪಡಿಸಿ ಲೈಂಗಿಕ ಅತ್ಯಾ ಚಾರವೇ ಈ ವರ್ಷದ ಮಹಾ ಪ್ರಳಯ. ಇದು ಮನುಕುಲಕ್ಕೆ ಕಳಂಕವಾಗಿ ಪರಿಣಮಿಸಿದೆ. ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರು ಒಗ್ಗಟ್ಟಾಗ ಬೇಕು ಎಂದರು.
ಬೂವನಹಳ್ಳಿ ಚನ್ನಕೇಶವಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ವಿಜಯಕುಮಾರ್ ಮಾತನಾಡಿ ಮಹಿಳೆ ಯರ ಅತ್ಯಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತವು ನಾಲ್ಕನೆ ಸ್ಥಾನವನ್ನು ತಲುಪಿದೆ. ಈ ರೀತಿಯ ಅಘಾತಕಾರಿ ಬೆಳವಣಿಗೆ ದೇಶಕ್ಕೊಂದು ಕಪ್ಪು ಚುಕ್ಕಿಯಾಗಿ ಪರಿಣಮಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಶ್ಯಾಮ ಭಟ್ ಮಹಿಳಾ ಲೈಂಗಿಕ ಅತ್ಯಾಚಾರದ ಬಗ್ಗೆ ಮಾತನಾಡುತ್ತಾ ಈ ದುರ್ಘಟನೆ ಗಳನ್ನು ನಿರ್ಮೂಲನೆ ಮಾಡಬೇಕಾದರೆ ದುಷ್ಕರ್ಮಿಗಳಿಗೆ ತಕ್ಷಣವೇ ಶಿಕ್ಷೆಯಾಗುವಂತಹ ಕಾಯ್ದೆ ಜಾರಿಗೆ ಬರಬೇಕು. ಮಹಿಳೆಯನ್ನು ಪೂಜನೀಯ ಭಾವನೆಯಿಂದ ನೋಡಬೇಕು. ಇಂದಿನ ಜಾಗತಿಕ ಯುಗದಲ್ಲಿ ಮಹಿಳೆ ಅಡುಗೆ ಮನೆಗಷ್ಟೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಇದಕ್ಕೆ ಅಂತರಿಕ್ಷಕ್ಕೆ ಕಾಲಿಟ್ಟ ಕಲ್ಪನಾ ಚಾವ್ಲ ಅವರ ಸಾಧನೆಯೇ ಸಾಕ್ಷಿ ಎಂದು ಸ್ಮರಿಸಿದರು.
ಇಂದಿರಾಗಾಂಧಿ, ವಿಜಯಲಕ್ಷ್ಮಿ ಪಂಡಿತ್, ಸುಧಾಮೂರ್ತಿ ಮುಂತಾದ ಸಾಧಕಿಯರ ಹಾಗೆ ಕಾಲೇಜಿನ ವಿದ್ಯಾರ್ಥಿನಿಯರು ಆತ್ಮವಿಶ್ವಾಸ ಹೊಂದಬೇಕು ಎಂದರು. ಸಮಾಜಸೇವಕಿ ಶಾಲಿವರ್ಗೀಸ್ ಗೀತೆಗಳನ್ನು ಹಾಡಿದರು.
ಅನ್ನಮ್ಮ ಸ್ವಾಗತಿಸಿದರು. ಪೂರ್ಣಿಮ ನಿರೂಪಿಸಿದರು. ಆಶಾ ವಂದಿಸಿದರು.