ಹೆಣ್ಣು, ಗಂಡು ಪರಸ್ಪರ ಪೂರಕವೇ ಹೊರತು ಸ್ಪರ್ಧಾಳುಗಳಲ್ಲ: ಪ್ರಭಾಕರ್
ಕನ್ನಡಪ್ರಭವಾರ್ತೆ ಹಾಸನ ಮಾ. 15
ಪ್ರಕೃತಿಯಲ್ಲಿ ಹೆಣ್ಣು -ಗಂಡು ಇಬ್ಬರೂ ಒಬ್ಬರಿಗೊಬ್ಬರು ಪೂರಕವೇ ಹೊರತು ಸ್ಪರ್ಧಾಳುಗಳಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಟಿ.ಎನ್. ಪ್ರಭಾಕರ್ ಹೇಳಿದರು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಇತಿಹಾಸವನ್ನು ಗಮನಿಸಿದರೆ ಹೆಣ್ಣು ಮತ್ತು ಗಂಡಿಗೆ ಭೇದ ತೋರಿಸಿಲ್ಲ. ಒಬ್ಬರಿಗೊಬ್ಬರು ಪೂರಕ ಎಂದು ಹೇಳಿದರು. ಪುರುಷರಿಂದ ಮಹಿಳೆಯರಿಗೆ ಹಾಗೂ ಮಹಿಳೆಯರಿಂದ ಪುರುಷರಿಗೆ ಆಗಿರುವ ಉಪಕಾರ ನೆನಪಿಸಿಕೊಂಡು ಸಹ ಬಾಳ್ವೆಯನ್ನು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಹಿಂದಿನ ಮಹಾಪುರುಷರು ಹಾಗೂ ಮಹಾಸಂತರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ ಒಬ್ಬರ ವ್ಯಕ್ತಿತ್ವ ಇನ್ನೊಬ್ಬರಿಗೆ ತಿಳಿಸುವಂತೆ ಕರೆ ನೀಡಿದರು. ಇದೇ ವೇಳೆ ವಿದ್ಯಾರ್ಥಿನಿಯರು ಚಲನಚಿತ್ರ ಗೀತೆಗಳಿಗೆ ಸಾಮೂಹಿಕ ನೃತ್ಯ ಮಾಡಿದರು. ಪ್ರಾಂಶುಪಾಲ ವಿ. ಕೃಷ್ಣಪ್ಪ, ಉಪನ್ಯಾಸಕ ಲೋಕಪ್ಪಗೌಡ, ಸುಂದರ್, ಶ್ರೀನಿವಾಸ್, ದಿಲೀಪ್‌ಕುಮಾರ್ ಇದ್ದರು.