ಕಾಡಿನ ಕಲ್ಲೇಶ್ವರನಿಗೆ ಕಾಂಕ್ರಿಟ್ ರಸ್ತೆ ಯೋಗ...
ಕ.ಪ್ರ.ವಾರ್ತೆ ಹಾರನಹಳ್ಳಿ ಮಾ. 16
ಪ್ರಕೃತಿ ವನಸಿರಿಯ ನಡುವೆ ಜೀವನದಿಯಾಗಿ ಹರಿಯುತ್ತಿರುವ ಗಂಗೆ ಸ್ವಲ್ಪದೂರ ಸಾಗಿ ಕಣ್ಮರೆಯಾಗುವ ವಿಶೇಷ ಪುಣ್ಯಕ್ಷೇತ್ರವಾದ ದೊಡ್ಡಕಲ್ಲೆದೇವರಹಳ್ಳ ಎಂದೇ ಕರೆಯಲ್ಪಡುವ ಕಲ್ಲೇಶ್ವರ ದೇವಾಲಯಕ್ಕೆ ಹಾಸನ ರಸ್ತೆಯಿಂದ 10 ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿತು.
ಹಾರನಹಳ್ಳಿ ಬೆಲವತ್ತಹಳ್ಳಿ ನಡುವೆ ಹಾಸನ ರಸ್ತೆಯ ಎಡಭಾಗದಲ್ಲಿ ಅರಣ್ಯದ ಮಧ್ಯಪ್ರದೇಶದಲ್ಲಿ ಪುರಾತನ ಕಲ್ಲೇಶ್ವರ ಸ್ವಾಮಿ ದೇವಸ್ಥಾನವಿದ್ದು, ಮುಂಭಾಗದಲ್ಲಿಯೇ ಗಂಗೆ ಉದ್ಭವಗೊಂಡಿದ್ದು ಎಂತಹ ಬರಗಾಲ ಬೇಸಿಗೆಯಲ್ಲಿಯೂ ಈ ಚಿಲುಮೆಯಿಂದ ಗಂಗೆ ಹರಿಯುವ ದೃಶ್ಯ ನಾಸ್ತಿಕರಿಗೂ ಭಕ್ತಿಮೂಡಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತದೆ.
ಪ್ರಚಾರದ ಕೊರತೆಯಿಂದಾಗಿ ಈ ರಮಣಿಯ ಹಾಗೂ ವಿಶೇಷ ಸ್ಥಳಕ್ಕೆ ಹೆಚ್ಚಿನ ಯಾತ್ರಿಕರು ಬಾರದಿರುವುದರಿಂದ ನೈಸರ್ಗಿಕ ವಾತಾವರಣಕ್ಕೆ ಯಾವ ಧಕ್ಕೆಯೂ ಆಗಿಲ್ಲ. ಈವರೆಗೆ ಈ ದೇವಾಲಯದತ್ತ ಜನಪ್ರತಿನಿಧಿಗಳು ವಿಶೇಷ ಕಾಳಜಿ ತೋರದಿರುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ಕ್ರಮಿಸುವುದು ಭಕ್ತಾಧಿಗಳಿಗೆ ದುಸ್ತರವಾಗಿತ್ತು.
ಇದೀಗ ಶಾಸಕ ಕೆ.ಎಂ.ಶಿವಲಿಂಗೇಗೌಡ ಈ ನಿಟ್ಟಿನಲ್ಲಿ ಗಮನ ಹರಿಸಿ 10 ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗೆ ಸರ್ಕಾರದಿಂದ ಮಂಜೂರಾತಿ ದೊರಕಿಸಿ ಕೊಟ್ಟಿರುವುದು ಭಕ್ತರಿಗೆ ಸಂತಸ ತಂದಿದೆ.
ಮುಖ್ಯ ರಸ್ತೆಯಿಂದ ಸುಮಾರು 1 ಕಿ.ಮೀ. ದೇವಾಲಯವರೆಗೆ ಪ್ರಸ್ತುತ ಜಲ್ಲಿ ರಸ್ತೆಯಿತ್ತಾದರೂ ಅಷ್ಟು ಉತ್ತಮ ವಾಗಿರಲಿಲ್ಲ. ಈ ಕಾಮಗಾರಿಯಿಂದ ಭಕ್ತಾದಿಗಳು ಸುಲಲಿತವಾಗಿ ದೇವಾಲಯಕ್ಕೆ ತೆರಳಲು ಸಹಕಾರಿಯಾಗಲಿದೆ.
ಕಾಮಗಾರಿಯನ್ನು ಸಾರ್ವಜನಿಕವಾಗಿಯೇ ನಿರ್ವಹಿಸಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಚಿಂತನೆ ಭಕ್ತಾಧಿಗಳದ್ದಾಗಿದ್ದು ಇದಕ್ಕಾಗಿ ಹಾರನಹಳ್ಳಿಯ ಶ್ರೀ ಸಿದ್ಧಿ ವಿನಾಯಕ ಸ್ವಸಹಾಯ ಸಂಘ ಕಾಮಗಾರಿ ನಿರ್ವಹಿಸಲು ಮುಂದೆ ಬಂದಿದ್ದಾರೆ.
ಯೋಜನೆಯನ್ನು ದೊರಕಿಸಿಕೊಟ್ಟ ಶಾಸಕರಿಗೆ ಸಂಘದ ಅಧ್ಯಕ್ಷ ಎಚ್.ಬಿ.ರಾಜಣ್ಣ ಕೃತಜ್ಞತೆ ಹೇಳಿದ ಅವರು ಬರುವ ಭಕ್ತಾಧಿಗಳಿಗೆ ಪ್ರಸಾದ ದಾಸೋಹ ಕುಟೀರವೊಂದನ್ನು ನಿರ್ಮಿಸುವ ಅಗತ್ಯವಿದೆ.
ಭಕ್ತಾಧಿಗಳ ಹಾಗೂ ಶಾಸಕರ ಸಹಕಾರದಿಂದ ಇದನ್ನು ಕಾರ್ಯರೂಪಕ್ಕೆ ತರುವ ಚಿಂತನೆ ನಮ್ಮದಾಗಿದೆ ಎಂದರು.
ಭೂಮಿಪೂಜೆಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಎಂ.ಜಗದೀಶ್, ಉಪಾಧ್ಯಕ್ಷ ಎಚ್.ಆರ್.ಮೋಹನ್, ಜಯಪ್ರಕಾಶ್, ಶ್ರೀಧರಚಾರ್, ಬಸವರಾಜ್, ಮಲ್ಲಿಕಾರ್ಜುನಯ್ಯ, ಗುತ್ತಿಗೆದಾರ ಮಹೇಶ್ ಇದ್ದರು.