ರು. 5.27 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
ಕ.ಪ್ರವಾರ್ತೆ ರಾಮನಾಥಪುರ ಮಾ. 16
ತಪ್ಪು ಮಾಡುವುದು ಮನುಷ್ಯನ ಸಹಜ ಗುಣ, ಅದನ್ನು ತಿದ್ದಿಕೊಂಡು ನಡೆಯುವುದು, ಅವರ ಸದ್ಗುಣ ಎಂದು ಕ್ಷೇತ್ರದ ಶಾಸಕ ವಾಲೆ ಎ. ಮಂಜು ಹೇಳಿದರು.
ರಾಮನಾಥಪುರ ಹೋಬಳಿಯ ಗೊಬ್ಬಳಿ, ವಡ್ಡರಹಳ್ಳಿ, ದೊಡ್ಡಬೆಮ್ಮತ್ತಿ, ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ಶಾಲೆಗೆ 5.27 ಲಕ್ಷ ರು ವೆಚ್ಚದಲ್ಲಿ ನೂತನ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಹನ್ಯಾಳು ಗ್ರಾಮದಲ್ಲಿ ನಿರ್ಮಾಣ ವಾಗಿರುವ ಸರ್ಕಾರಿ ಪ್ರೌಢಶಾಲೆಯ ನೂತನ 4 ಶಾಲಾ ಕೊಠಡಿಗಳ ಉದ್ಘಾಟನೆ, ಸುಮಾರು 25 ಲಕ್ಷ ರು. ವೆಚ್ಚದಲ್ಲಿ ಸಮುದಾಯ ಭವನ ಉದ್ಘಾಟನೆ, 13 ಲಕ್ಷ ರು. ವೆಚ್ಚದಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ-ತಂದೆಗಳಿಗೆ ನಿಜವಾದ ಸಂಪತ್ತು ಎಂದರೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದು ಎಂದ ಅವರು, ಮಕ್ಕಳನ್ನು ವಿದ್ಯಾವಂತರು, ಗುಣವಂತರಾಗಿಯೂ ಮಾಡಿ ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮಟ್ಟಕ್ಕೆ ಬೆಳೆದು ತೀವ್ರ ಸ್ವರ್ಧೆ ನೀಡುವಂತಾಗಲು ಸರ್ಕಾರ ಮೂಲಭೂತ ಸೌಲಭ್ಯದ ಜೊತೆಗೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯುಕೆಜಿ ತರಗತಿಗಳನ್ನು ಕಳೆದ ವರ್ಷದಿಂದ ಉಚಿತವಾಗಿ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಅಧಿಕಾರಿಗಳು ಸಹ ತಮ್ಮ ಮಕ್ಕಳನ್ನು ಮುಂದೆ ಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಶಾಸಕ ಮಂಜು ಕಿವಿಮಾತು ಹೇಳಿದರು.
ತಾರಾಮಂಜು, ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಮಾಜಿ ಉಪಾಧ್ಯಕ್ಷೆ ಶ್ರೀಶೈಲ, ಹೋಬಳಿ ಅಧ್ಯಕ್ಷ ಜಿ.ಸಿ. ಮಂಜೇಗೌಡ, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿರದನಹಳ್ಳಿ ಎಸ್.ಎಂ. ಮಲ್ಲೇಶ್ ಹಾಗೂ ಗಂಗೂರು ಶಂಕರೇಗೌಡ, ಸದಸ್ಯ ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಯ್ಯ, ರೇವಣ್ಣ, ಜಯಣ್ಣ, ಚಂದ್ರಣ್ಣ ಇದ್ದರು.