ನೀರಿಗಾಗಿ ನವಿಲುಗಳ ರುದ್ರ ನರ್ತನ
ದಯಾಶಂಕರ ಮೈಲಿ
ಹಾಸನ: ಬಂಡೀಪುರ, ನಾಗರಹೊಳೆ ಇರುವ ಕಾಡಾನೆ, ಜಿಂಕೆ ಮತ್ತಿತರ ಪ್ರಾಣಿಗಳಿಗಷ್ಟೇ ಅಲ್ಲ, ಹಾಸನ ಜಿಲ್ಲೆಯ ಬೇಲೂರು ವಲಯದ ಮನ್ನಾ ಜಂಗ್ಲಿ ಅರಣ್ಯದಲ್ಲೂ (ಸಂರಕ್ಷಿತ ಅರಣ್ಯ) ನೂರಾರು ಮಯೂರಗಳು ನೀರಿಗಾಗಿ ರುದ್ರ ನರ್ತನ ಮಾಡುವಂತಾಗಿದೆ.
ಹಾಸನ-ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಮನ್ನಾ ಜಂಗ್ಲಿ ಅರಣ್ಯ ಸುಮಾರು 940 ಎಕರೆ ವಿಸ್ತೀರ್ಣದಲ್ಲಿದೆ. ಈ ಅರಣ್ಯದಲ್ಲಿ ಚಿರತೆ, ಜಿಂಕೆ ಜತೆಗೆ ನೂರಾರು ಸಂಖ್ಯೆಯಲ್ಲಿ ನವಿಲುಗಳಿವೆ. ಇವು ನೀರಡಿಕೆ ನೀಗಿಸಿಕೊಳ್ಳಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಇಲ್ಲಿರುವ ನವಿಲುಗಳ ರಮಣೀಯ ನರ್ತನ ನೀರಿಲ್ಲದೇ ನಿಂತಿದ್ದು, ರುದ್ರ ನರ್ತನ ಮಾಡುವಂತಾಗಿದೆ. ನೀರಡಿಕೆ ನೀಗಿಕೊಳ್ಳಲು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ನವಿಲುಗಳು ನೀರಿಗಾಗಿ ಹಪಹಪಿಸುತ್ತಿರುವುದನ್ನು ನೋಡಲಾಗದೇ ಮಮ್ಮುಲ ಕರಗಿದ ಸ್ಥಳೀಯರು ಗುಂಡಿ ತೋಡಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೂ, ಅದು ಸಾಕಾಗುತ್ತಿಲ್ಲ. ದಾಹ ನೀಗಿಸಿಕೊಳ್ಳಲು ನವಿಲುಗಳು ವಲಸೆ ಹೋಗುತ್ತಿವೆ. ಅರಣ್ಯ ಇಲಾಖೆ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ನವಿಲುಗಳ ದಾಹ ನೀಗಿಸಲಿ ಅನ್ನೋದು ಪಕ್ಷಿ ಪ್ರಿಯರ ಆಗ್ರಹ.
ಬರಿದಾದ ಕೆರೆ: ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕಾಡಿನಲ್ಲಿರುವ ಕೆರೆ, ಕಟ್ಟೆಗಳಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿಲ್ಲ. ಬಿಸಿಲಿನ ಬೇಗೆಗೆ ಇದ್ದ ನೀರು ಆವಿಯಾಗಿದೆ.
ಈ ಮಧ್ಯೆಯೇ ಕೆಲವು ಕಿಡಿಗೇಡಿಗಳು ಕಾಡಿಗೆ ಕೊಳ್ಳಿ ಇಟ್ಟಿರುವುದರಿಂದ ಇತ್ತ ನೀರೂ ಇಲ್ಲ... ಅತ್ತ ಆಹಾರವೂ ಇಲ್ಲ ಎಂಬ ದುಸ್ಥಿತಿ ಸೃಷ್ಟಿಯಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿ-ಪಕ್ಷಿಗಳು ಬಿರು ಬಿಸಿಲ ನಡುವೆ ಅಲೆಯಬೇಕಾಗಿದೆ.
ಕಾಡಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂಗಾರು, ಹಿಂಗಾರು ಮಳೆಗಳು ಕೈ ಕೊಟ್ಟಿದ್ದರಿಂದ ನೀರಿಗೆ ತೊಂದರೆಯಾಗಿದೆ. ಕಾಡಿನಲ್ಲಿರುವ ಗುಂಡಿಗಳಿಗೆ ಸಾಧ್ಯವಾದಷ್ಟು ನೀರು ಒದಗಿಸಿ, ಸಮಸ್ಯೆಯನ್ನು ಕೈಲಾದಷ್ಟು ಮಟ್ಟಿಗೆ ಬಗೆಹರಿಸಬೇಕಾಗಿದೆ.
ವಿವಿಧ ಕಾರಣಗಳಿಂದ ಮೊದಲೇ ಕಾಡು ಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿದೆ. ಈ ಮಧ್ಯೆ ನೀರು-ಆಹಾರದ ಕೊರತೆಯಿಂದ ಬೇರೆಡೆಗೆ ವಲಸೆ ಹೋಗುತ್ತಿರುವ ರಾಷ್ಟ್ರೀಯ ಪಕ್ಷಿಗಳನ್ನು ಸಂರಕ್ಷಿಸುವ ಹೊಣೆ ಇಲಾಖೆ ಹೊರಬೇಕಾಗಿದೆ.
ಮುಂದಿನ ದಿನಗಳಲ್ಲಿ ಕಾಡಿನಲ್ಲಿ ಕೆರೆಯ ಹುಳು ತೆಗೆದು, ಹೆಚ್ಚಿನ ನೀರು ನಿಲ್ಲುವಂತೆ ಮಾಡಲು ಮತ್ತು ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸುವ ಯೋಜನೆಯನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ.
ಟಿ ಲಕ್ಷಣ್, ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿ