ಮುರಿದು ಬಿದ್ದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಧ್ವಜಸ್ತಂಭ
ಹೊಳೆನರಸೀಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಒಳ ಆವರಣದಲ್ಲಿದ್ದ ನೂರಾರು ವರ್ಷ ಪುರಾತನವಾದ ಧ್ವಜಸ್ತಂಭವು ಶಿಥಿಲಗೊಂಡು ಮೇಲ್ಭಾಗವು ಶನಿವಾರ ಮುರಿದು ಬಿದ್ದಿದೆ.
ಪುರಾಣ ಪ್ರಸಿದ್ಧಿ ಪಡೆದಿರುವ ಈ ದೇವಾಲಯದಲ್ಲಿ ಶ್ರೀಯವರ ಬ್ರಹ್ಮರಥೋತ್ಸವವು ಇದೇ ಮಾ.25ರಂದು ನಡೆಯಲಿದ್ದು, ಧ್ವಜಸ್ತಂಭವು ಮುರಿದು ಬಿದ್ದಿರುವುದರಿಂದ ಭಕ್ತರು ಹಾಗೂ ನಾಗರಿಕರಲ್ಲಿ ಆತಂಕ ಮೂಡಿಸಿದೆ.
ತೇಗದ ಮರದಿಂದ ನಿರ್ಮಿಸಲ್ಪಟ್ಟಿದ್ದ ಧ್ವಜಸ್ತಂಭಕ್ಕೆ ಕಳೆದ 6 ವರ್ಷಗಳ ಹಿಂದೆಯಷ್ಟೇ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ವಿಗ್ರಹದ ಪುನರ್ ಪ್ರತಿಷ್ಠಾಪನಾ ಮಹೋತ್ಸವ, ದೇವಾಲಯದ ನವೀಕರಣ ನಡೆಸಿದ ಸಂದರ್ಭದಲ್ಲಿ ಧ್ವಜಸ್ತಂಭವನ್ನೂ ನವೀಕರಿಸಲಾಗಿತ್ತು. ಮರದ ಧ್ವಜಸ್ತಂಭಕ್ಕೆ ಭಕ್ತಾದಿಗಳ ಸಹಕಾರದೊಂದಿಗೆ ಇಲ್ಲಿನ ಪ್ರಮುಖ ಭಕ್ತರೊಬ್ಬರು ತಾಮ್ರದ ತಗಡಿಗೆ ಚಿನ್ನದ ಲೇಪನ ಮಾಡಿ ಲಕ್ಷಾಂತರ ಮೌಲ್ಯದ ಹೊದಿಕೆಯನ್ನು ಅಳವಡಿಸಲಾಗಿತ್ತು.
ಧ್ವಜಸ್ತಂಭ ಬದಲಿಸಿರಲಿಲ್ಲ: ಆದರೆ ಆಗಲೇ ಸಾಕಷ್ಟು ಹಳೆಯದಾಗಿದ್ದ ಧ್ವಜಸ್ತಂಭದ ಮರವನ್ನೇ ದುರಸ್ತಿಪಡಿಸಿ ನವೀಕರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ನಂತರದ ದಿನಗಳಲ್ಲಿ ಶಿಥಿಲಗೊಂಡಿದ್ದ ಧ್ವಜಸ್ತಂಭದ ಮೇಲ್ಭಾಗವು ಕ್ರಮೇಣ ಬಾಗತೊಡಗಿತ್ತು. ಇದನ್ನು ಕಂಡ ಭಕ್ತಾದಿಗಳು ಶಿಥಿಲಗೊಂಡಿರುವ ಧ್ವಜಸ್ತಂಭವನ್ನು ಬದಲಾಯಿಸುವ ಚಿಂತನೆಗಳೂ ಸಹಾ ನಡೆದಿತ್ತು. ಆದರೆ ಶ್ರೀಯವರ ಬ್ರಹ್ಮರಥೋತ್ಸವಕ್ಕೆ 9 ದಿನಗಳು ಬಾಕಿ ಇರುವಾಗ ಇದ್ದಕ್ಕಿದ್ದಂತೆಯೇ ಧ್ವಜಸ್ತಂಭದ ಮೇಲ್ಭಾಗವು ಮುರಿದು ಬಿದ್ದಿದೆ.
ನೂತನವಾದ ಧ್ವಜಸ್ತಂಭ ಸ್ಥಾಪಿಸಲು ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಮರುಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಧ್ವಜಸ್ತಂಭದ ದಾನಿಗಳಲ್ಲೊಬ್ಬರಾದ ದಿ. ಪಿಎಚ್ಇ ಕೃಷ ಅವರ ಸಹೋದರ ವೆಂಕಟೇಶ್ ತಿಳಿಸಿದ್ದಾರೆ.