'ಶಂಕರ್ ಸೋಲಿಗೆ ಕಾಣದ ಕೈಗಳ ಕೆಲಸ'
ಹಾಸನ: ನಗರಸಭೆ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಅವರ ಸೋಲಿಗೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಎಚ್.ಡಿ. ರೇವಣ್ಣ ಅಭಿಮಾನಿಗಳ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಶ್ರೀಧರ್ ಆರೋಪಿಸಿದ್ದಾರೆ. ಶಂಕರ್ ನಗರದ 34ನೇ ವಾರ್ಡಿನಿಂದ ಮೂರು ಬಾರಿ ಗೆದ್ದು, ನಗರಸಭೆ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರ ಸೋಲಿಗೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ದೂರಿದ್ದಾರೆ.
ಎಚ್ಚರಿಕೆ: ಶಂಕರ್ ಉನ್ನತ ಮಟ್ಟದ ರಾಜಕಾರಣವನ್ನು ಕಂಡ ಕೆಲವು ರಾಜಕಾರಣಿಗಳು ಅವರ ಮೇಲೆ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂಬ ವದಂತಿಗಳು ಚುನಾವಣೆಯ ನಂತರ ಕೇಳಿ ಬರುತ್ತಿವೆ. ನಿಜವಾದ ವಿಚಾರ ಬಯಲಿಗೆ ಬಂದಿದ್ದೇ ಆದರೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಶಂಕರ್ ಅವರ ವರ್ಚಸ್ಸನ್ನು ಹೆಚ್ಚಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆಯನ್ನೋ ಅಥವಾ ಜೆಡಿಎಸ್ ರಾಜ್ಯ ಘಟಕದಲ್ಲಿ ಉತ್ತಮ ಹುದ್ದೆಯನ್ನಾದರೂ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.