ಜೂಜಾಟ: 15 ಮಂದಿ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ, ಬೈರನಾಯಕನಹಳ್ಳಿ ಗ್ರಾಮದ ಹತ್ತಿರ ಸರ್ಕಾರಿ ಖಾಲಿ ಜಾಗದ ಹಳ್ಳದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಜಾವರ್ ಮೊಹಲ್ಲಾದ ಮೆಹಬೂಬ್‌ಪಾಷ (30), ಸೈಯದ್ ಹುಸೇನ್ (40), ಭಕ್ಷಿ (24), ಹಸೈನ್ (35) ಬಂಧಿತರು. ಜೂಜಾಟಕ್ಕಿಟ್ಟಿದ್ದ 4600 ರು. ನಗದನ್ನು ಗ್ರಾಮಾಂತರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ಪಟ್ಟಣ, ಹಾಸನ ರಸ್ತೆ ಬಲಭಾಗ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಿಂಭಾಗ ಸ್ಮಶಾನ ಜಾಗದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ರಸ್ತೆಯ 9ನೇ ಕ್ರಾಸಿನ ಅಲ್ತಾಫ್ (25), 11ನೇ ಕ್ರಾಸಿನ ಇಬ್ರಾಹಿಂ (32), ಇಮ್ರಾನ್ (22), ಜೇನುಕಲ್ ನಗರದ ಸುಬ್ರಹ್ಮಣಿ (28) ಬಂಧಿತ ಜೂಜುಕೋರರು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 885 ರು. ನಗದನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ದೊಡ್ಡಮತ್ತಿಘಟ್ಟ ಗ್ರಾಮದ ಹಾಸನ-ಬೆಂಗಳೂರು ರಸ್ತೆ ಬೈಪಾಸ್ ರಸ್ತೆಯ ಪಕ್ಕದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗೂರು ಗ್ರಾಮದ ಜಯರಾಮ್ (60), ಗಂಗಾಧರ (40), ಶಿವಣ್ಣ (55), ದೊಡ್ಡಮತ್ತಿಘಟ್ಟದ ದೇವರಾಜ (35), ರವಿ (40 ), ತಿಮ್ಮಶೆಟ್ಟಿ (56), ಸುರೇಶ (50) ಬಂಧಿತ ಆರೋಪಿಗಳು. ಪಣಕ್ಕಿಟ್ಟಿದ್ದ 16060 ರು. ನಗದು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮದ್ಯ ವಶ
ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿಯ ಜಾಗೂರು ಗ್ರಾಮದ ಶಿವಣ್ಣ ಮತ್ತು ಕುಮಾರ್ ಎಂಬುವರು ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಪರಾರಿಯಾದ ಘಟನೆ ನಡೆದಿದೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಇಟ್ಟಿದ್ದ 6850 ರು. ಬೆಲೆಯ ರಾಜಾ ವಿಸ್ಕಿ ಮತ್ತು ಮದ್ಯವನ್ನು ಗ್ರಾಮಾಂತರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಾಲಕ ನಾಪತ್ತೆ
ಅರಸೀಕೆರೆ: ಪಟ್ಟಣದ ಕಂತೇನಹಳ್ಳಿಯ ವೆಂಕಟಪ್ಪ ಎಂಬುವರ ಪುತ್ರ ನಾಗೇಶ್ (14) ಮನೆಯಿಂದ ಸ್ಕೂಲಿಗೆ ಹೋದವನು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕೋಲುಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಅರ್ಧತೋಳಿನ ಶರ್ಟ್, ಬಿಸ್ಕತ್ ಕಲರ್ ಪ್ಯಾಂಟ್ ಧರಿಸಿದ್ದನು ಎಂದು ಆತನ ತಂದೆ ನಾಗೇಶ್ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಅರಸೀಕೆರೆ: ತಾಲೂಕಿನ ಹಾರನಹಳ್ಳಿಯ ಮಂಜುನಾಥ ಎಂಬುವರ ಪುತ್ರಿ ದಿವ್ಯ (21) ಅರಸೀಕೆರೆ ಪಟ್ಟಣ ಬಜಾರ್ ಬೀದಿ ಪ್ಲಾಜಾ ಬ್ಯೂಟಿ ಪಾರ್ಲರ್‌ಗೆ ಹೋದವಳು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಳಿ ಮತ್ತು ನೀಲಿ ಬಣ್ಣದ ಚೂಡಿದಾರ ಧರಿಸಿದ್ದರು ಎಂದು ಆಕೆಯ ತಂದೆ ಮಂಜುನಾಥ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಟ್ಕಾ: ಒಬ್ಬ ಬಂಧನ
ಹಾಸನ: ಮಟ್ಕಾ ಜೂಜಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೆನ್ಷನ್ ಮೊಹಲ್ಲಾ ಶಾಹಿ ಮಸೀದಿಯ ಹತ್ತಿರ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಪೆನ್ಷ್‌ನ್ ಮೊಹಲ್ಲಾ ವಾಸಿ ಶೇಖ್ ಆಹಮದ್ (29) ನನ್ನು ಬಂಧಿಸಿದ್ದು, 770 ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.