ರಾಜಕೀಯ ಕಾರಣಕ್ಕೆ ಅಮಾಯಕರ ಮೇಲೆ ಹಲ್ಲೆ: ಎಎಸ್ಪಿಗೆ ಮನವಿ
ಕ.ಪ್ರ.ವಾರ್ತೆ ಹಾಸನ ಮಾ. 19
ರಾಜಕೀಯ ಹಿನ್ನೆಲೆಯಲ್ಲಿ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುಂತೆ ಆಗ್ರಹಿಸಿ ಮೆಹಬೂಬ್ ನಗರದ ನಿವಾಸಿಗಳು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿದರು.
ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ 22ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಹಪಿಜುರ್ ರೆಹಮಾನ್ ಪರ ಚುನಾವಣೆಯಲ್ಲಿ ಸಹಕರಿಸಿಲ್ಲ ಎಂಬ ಏಕೈಕ ಕಾರಣದಿಂದ ವಜೀರ್‌ಸಾಬ್ ಪುತ್ರ ಆದಿಲ್ ಹಾಗೂ ಜಮಬಾಜಿ, ಸೂಫಿ ಎಂಬುವರು ಸೋಮವಾರ ರಾತ್ರಿ ಶಾಹಿ ಮಸೀದಿ ಹಿಂಭಾಗದಲ್ಲಿ ಏಕಾಏಕಿ ಅಮಾಯಕ ಗಫಾರ್ ಷರೀಫ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಜಗಳವನ್ನು ಬಿಡಿಸಿದ್ದಾರೆ.
ನಂತರ ಗಫಾರ್ ಷರೀಫ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೇ ಅಲ್ಲದೆ ಹಲ್ಲೆ ಮಾಡಿದ ವ್ಯಕ್ತಿಗಳು ರಾತ್ರಿ ವೇಳೆ ಜನ ಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದಾರೆ.
ಚುನಾವಣೆಯಲ್ಲಿ ಸಹಕಾರ ನೀಡಲಿಲ್ಲ ಎಂದು ಆರೋಪಿಸಿ ನೀರು ಸರಬರಾಜು ಮಾಡುವ ಪೈಪ್ ಒಡೆಯುವುದು, ನಲ್ಲಿಗಳನ್ನು ಕೀಳುವುದು, ವಿದ್ಯುತ್ ಸಂಪರ್ಕ ಕಡಿತ ಹಾಕುವುದು, ತಡ ರಾತ್ರಿಯಲ್ಲಿ ಮನೆಗಳ ಬಾಗಿಲು ತಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಪಾರ್ ಷರೀಫ್‌ನನ್ನು ನೋಡಲು ಬಂದಿದ್ದ ಆರೀಫ್, ಜಮೀರ್, ಆಯೂಬ್ ಎಂಬುವರ ಮೇಲೆ ಆರೋಪಿಗಳು ಆಟೋದಲ್ಲಿ ಬಂದು ಆಸ್ಪತ್ರೆ ಆವರಣದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವಾರ್ಡ್‌ನಲ್ಲಿ ಬಹುತೇಕ ಬಡವರು ವಾಸ ಮಾಡುತ್ತಿದ್ದು, ಕೂಲಿ ಮಾಡಿಕೊಂಡು ರಾತ್ರಿ ವೇಳೆ ಮನೆಗೆ ಬರುವಾಗ ಅವರನ್ನು ಬೆದರಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ನಗರಸಭೆ ಸದಸ್ಯ ಯಶ್ವಂತ್, ಜುಲ್ಫಿಕರ್ ಅಲಿ ಇತರರು ಇದ್ದರು.
ಕೂಡಲೇ ಹಲ್ಲೆ ಮಾಡಿದಂತಹ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಮುಂದೆ ಈ ಬಡಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತಿದೆ ಹಾಗೂ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗುವುದು
- ಅಭಿನವ ಖರೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.