ವರದಕ್ಷಿಣೆಗಾಗಿ ಪತ್ನಿಗೆ ಕೊಲೆ ಬೆದರಿಕೆ: ಪತಿ ಬಂಧನ
ಕನ್ನಡಪ್ರಭವಾರ್ತೆ ಅರಕಲಗೂಡು ಮಾ.19
ವರದಕ್ಷಿಣೆಗೆ ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ ತವರು ಮನೆಯಲ್ಲಿದ್ದ ಪತ್ನಿಯ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಮಾಂಗಲ್ಯ ಕಿತ್ತುಕೊಂಡು ಪರಾರಿಯಾಗಿದ್ದ ಪತಿಯನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ.
ಅರಕಲಗೂಡು ಠಾಣೆ ವ್ಯಾಪ್ತಿಯ ಭಾಗ್ಯವತಿ ಎಂಬಾಕೆಯೊಂದಿಗೆ ರಾಮನಾಥಪುರ ಹೋಬಳಿಯ ಜೆ.ಹೊಸಳ್ಳಿ ಗ್ರಾಮದ ಯುವಕ ಕರೀಗೌಡರ ಮಗ ಎಚ್.ಕೆ.ನಾಗೇಶ ಜತೆಗೆ 2011ರ ಮಾರ್ಚ್ 7 ರಂದು ಮದುವೆಯಾಗಿತ್ತು. ಆ ಸಂದರ್ಭದಲ್ಲಿ 80 ಗ್ರಾಮ ಚಿನ್ನ ಮತ್ತು 40 ಸಾವಿರ ರು. ವರದಕ್ಷಿಣೆಯಾಗಿ ಪಡೆದಿದ್ದ ಆರೋಪಿ ನಾಗೇಶ, ಮದುವೆಯಾದ ಕೆಲವೇ ದಿನಗಳಲ್ಲಿ ಮತ್ತೆ 2 ಲಕ್ಷ ರು. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ.
ತವರು ಮನೆಗೆ ಬಂದ ಭಾಗ್ಯವತಿ ತನ್ನ ಪತಿ ದೈಹಿಕ ಹಾಗೂ ಮಾನಸಿಕವಾಗಿ ವರದಕ್ಷಿಣೆಗಾಗಿ ಹಿಂಸಿಸುತ್ತಿರುವ ಬಗ್ಗೆ ಹೇಳಿದಾಗ ಆಕೆಯ ತಂದೆ ತಾಯಿ ಮತ್ತು ಗ್ರಾಮದ ಮುಖಂಡರೊಂದಿಗೆ ಜೆ.ಹೊಸಳ್ಳಿಗೆ ತೆರಳಿ ಪಂಚಾಯಿತಿ ಮಾಡಿ ಬಂದಿದ್ದರು. ಅದಾದ ಕೇವಲ ಒಂದು ತಿಂಗಳಲ್ಲೇ ಮತ್ತೆ ವರದಕ್ಷಿಣೆ ಹಣ ತರುವಂತೆ ಪೀಡಿಸಲು ಆರಂಭಿಸಿದ್ದರಿಂದ ಮನನೊಂದ ಭಾಗ್ಯವತಿ ತವರಿಗೆ ಹಿಂದಿರುಗಿದ್ದಳು.ಗರ್ಭವತಿಯಾಗಿದ್ದಾಗ ತನ್ನ ತವರಿಗೆ ಬಂದಿದ್ದ ಆಕೆ ಈಗ 10 ತಿಂಗಳಿನ ಮಗುವಿನ ತಾಯಿಯಾಗಿದ್ದು, ಈಗಲೂ ತವರೂರು ಹಂಪಾಪುರದಲ್ಲೇ ವಾಸವಿದ್ದಾರೆ.
10-15 ದಿನಕ್ಕೆ ಒಮ್ಮೆ ಬಂದು ಹೋಗುತ್ತಿದ್ದ ನಾಗೇಶ ತಂದೆ ಮತ್ತು ಅಣ್ಣನಿಂದ 2 ಲಕ್ಷ ರು. ಗಳನ್ನು ತರುವಂತೆ ಒತ್ತಾಯಿಸುತ್ತಿದ್ದ. ಹಣ ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕುತ್ತಿದ್ದ ಎಂದು ಭಾಗ್ಯವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಹೆಂಡತಿ ಮನೆಗೆ ಬಂದ ಆರೋಪಿ ನಾಗೇಶ ಹೆಂಡತಿಯನ್ನು ಮಾತನಾಡಿಸುವ ನೆಪದಲ್ಲಿ ಮನೆಯ ಒಂದು ಭಾಗಕ್ಕೆ ಕರೆದೊಯ್ದು ಹಣ ಕೊಡಿಸುವಂತೆ ಪೀಡಿಸಿ ಹಲ್ಲೆ ನಡೆಸಿದ್ದಾನೆ.ನೋವಿನಿಂದ ಆಕೆ ಅಳುತ್ತಿದ್ದಾಗ ಕತ್ತಿಗೆ ಕೈ ಹಾಕಿದ ಆರೋಪಿ ಭಾಗ್ಯವತಿಯ ಕತ್ತಿನಲ್ಲಿದ್ದ 30 ಗ್ರಾಮ ಚಿನ್ನದ ನೆಕ್ಲೆಸ್ ಮತ್ತು 30 ಗ್ರಾಂ ಚಿನ್ನದ ಮಾಂಗಲ್ಯ ಕಿತ್ತು ಹಿಂದಿನ ಬಾಗಿಲಿನಿಂದ ಓಡಿಹೋಗಿರುತ್ತಾನೆ. ಈ ಸಂಬಂಧ ಭಾಗ್ಯವತಿ ನೀಡಿದ ದೂರಿನ ಮೇರೆ ನಾಗೇಶನನ್ನು ಬಂಧಿಸಿದ ಪೊಲೀಸರು,ಆತನಿಂದ ಮಾಗಲ್ಯಸರ ಮತ್ತು ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.