ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆಗೆ ಕೊಲೆ ಬೆದರಿಕೆ ಹಾಕಿ ಸುಲಿಗೆ: ಆರೋಪಿಗೆ ಶಿಕ್ಷೆ

Lingaraj Badiger
Updated On : 22 Mar 2013, 11:03 am

ಕನ್ನಡಪ್ರಭವಾರ್ತೆ,ಹಾಸನ,ಮಾ 21
ಮಹಿಳೆಗೆ ಕೊಲೆ ಬೆದರಿಕೆ ಹಾಕಿ ಸುಲಿಗೆ ಮಾಡಲು ಯತ್ನಿಸಿದ್ದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ತಾಲೂಕಿನ ಸಾಲಗಾಮೆ ಹೋಬಳಿ, ನಿಟ್ಟೂರು ಗ್ರಾಮದ ಪುಷ್ಪ ಎಂಬುವರು 2010  ಏ.14 ರಂದು ಹೊಲದ ಹತ್ತಿರ ಕಟ್ಟಿದ್ದ ದನಕರುಗಳನ್ನು ಹಿಡಿದುಕೊಂಡು ಬರಲು ಸಂಜೆ 5-30ರಲ್ಲಿ ತಮ್ಮ ತೆಂಗಿನ ತೋಟದ ಹತ್ತಿರ ಹೋಗುತ್ತಿದ್ದರು.
  ಈ ಸಂದರ್ಭದಲ್ಲಿ ಆರೋಪಿ ಪುನೀತ್‌ಕುಮಾರ್ ಪುಷ್ಪಾರನ್ನು ಹಿಡಿದು ಚಾಕು ತೋರಿಸಿ ಒಡವೆಗಳನ್ನು ಬಿಚ್ಚಿಕೊಡು ಇಲ್ಲದಿದ್ದರೆ ಕೊಲೆ ಮಾಡುತ್ತೇನೆಂದು ಹೆದರಿಸಿದ್ದ.
ಆಗ ಪುಷ್ಪ ಕಿವಿಯೋಲೆ ಬಿಚ್ಚಿ ಕೊಟ್ಟಿದ್ದು, ಮಾಂಗಲ್ಯ ಸರವನ್ನು ಸಹ ಬಿಚ್ಚಿಕೊಡು ಎಂದು ಆರೋಪಿ ಒತ್ತಾಯಿಸಿದ. ಆಕೆ ಸಹಾಯಕ್ಕಾಗಿ ಕೂಗಿಕೊಂಡರು.
 ಆಗ ಅಕ್ಕಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರು ಬರುತ್ತಿದ್ದನ್ನು ನೋಡಿದ ಆರೋಪಿ ಪುನೀತ್ ಓಡಿ ಹೋಗಿದ್ದ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಹಾಸನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ಮಾ.16 ರಂದು ಆರೋಪಿ ಪುನೀತ್‌ಕುಮಾರ್‌ಗೆ 2 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಕ್ರಮ ಮದ್ಯ ಸಾಗಾಣಿಕೆ: ಬಂಧನ
ಹಾಸನ: ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ತಾಲೂಕಿನ ಹೊಂಗೆರೆ ಶಾಂತಿಗ್ರಾಮ ರಸ್ತೆ ಆದಿ ಹನುಮಂತರಾಯ ದೇವಸ್ಥಾನದ ಹತ್ತಿರ ಹೊಂಗೆರೆ ಗ್ರಾಮದ ಹರೀಶ ಹಿರೋಹೊಂಡಾ ಬೈಕಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದಾಗ ಬೈಕ್ ತಡೆದ ಪೊಲೀಸರು ವಿಚಾರಣೆ ನಡೆಸಿ, ಆತನನ್ನು ಬಂಧಿಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಮಟ್ಕಾ ಜೂಜಾಟ: ಬಂಧನ
ಹಾಸನ: ನಗರ ಸಂತೇಪೇಟೆ ಗೊರೂರು ಸರ್ಕಲ್ ಬಳಿ ಮಟ್ಕಾ ಜೂಜಾಟ ಆಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಅಮೀರ್ (43) ಎಂಬಾತನನ್ನು ಬಂಧಿಸಿ, ಜೂಜಾಟಕ್ಕೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡಿದ್ದ 2070 ರು. ನಗದು ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮರಳು ಸಮೇತ ಟ್ರ್ಯಾಕ್ಟರ್ ವಶ
ಸಕಲೇಶಪುರ: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮರಳು ಸಮೇತ ಟ್ರ್ಯಾಕ್ಟರ್ ವಶ ಪಡಿಸಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ನಗರ ಬಾಳಗದ್ದೆ ಪ್ಲಾಂಟರ್ಸ್ ಹತ್ತಿರ ಟ್ರ್ಯಾಕ್ಟರ್ ಚಾಲಕ ಸರ್ಕಾರಕ್ಕೆ ರಾಜಧನ ಕಟ್ಟದೆ ಅಕ್ರವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾಗ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಚಾಲಕ ಪೊಲೀಸರನ್ನು ಕಂಡು ಪರಾರಿಯಾಗಿದ್ದಾನೆ. ನಂತರ ಟ್ರ್ಯಾಕ್ಟರ್‌ನ್ನು ವಶಪಡಿಸಿಕೊಂಡು, ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಜಾನುವಾರು ಸಾಗಣೆ: ಬಂಧನ
ಅರಸೀಕೆರೆ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಸೀಕೆರೆ-ಚನ್ನರಾಯಪಟ್ಟಣ ರಸ್ತೆಯಲ್ಲಿ ಗುರುವಾರ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಸಾತೇನಹಳ್ಳಿಯ ನಾಗರಾಜ (25), ಅಗಸರಹಳ್ಳಿಯ ಚಂದ್ರೇಗೌಡ (45) ಮತ್ತು ರೇವಣ್ಣ ಬಂಧಿತರು.
   ಇವರು ಅರಸೀಕರೆ-ಚನ್ನರಾಯಪಟ್ಟಣ ರಸ್ತೆ ಲಾಳನಕೆರೆ ಗೇಟ್ ಹತ್ತಿರ ಆಪಿ ಆಟೋದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿ 12 ಸಾವಿರ ರು. ಬೆಲೆಯ 6 ಸಿಂಧಿ ಕರುಗಳನ್ನು ವಶಪಡಿಸಿ ಕೊಂಡಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement