'ಮಾನವೀಯ ಮೌಲ್ಯ ಅಳವಡಿಕೆಯಿಂದ ಜೀವನ ಹಸನು'
ಕನ್ನಡಪ್ರಭವಾರ್ತೆ,ಹಾಸನ,ಮಾ.21
ಕನ್ನಡ ಸಾರಸ್ವತ ಲೋಕದ ಅನೇಕ ಮಹಾಕಾವ್ಯಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಇವುಗಳ ಅಧ್ಯಯನದಿಂದ ಹಾಗೂ ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಹಸನಾ ಗಿಸಿಕೊಳ್ಳಲು ಸಹಕಾರಿ ಎಂದು ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಗಮಕ ಕಲಾಶ್ರೀ ಗಣೇಶ್ ಉಡುಪ ಹೇಳಿದರು.
ನಗರದ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ನಡೆದ ಇಬ್ಬನಿ ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ, ಮಂತ್ರಿ, ಸಾಮಾನ್ಯ ಪ್ರಜೆ ಅವರವರ ಕಾರ್ಯವನ್ನು ಯಾವ ರೀತಿ ನಿರ್ವಹಿಸ ಬೇಕು ಎಂಬುದನ್ನು ಮಹಾ ಕಾವ್ಯಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ. ತಂದೆ, ತಾಯಿ, ಗುರುಹಿರಿಯರು, ಬಂಧು ಬಳಗದವರೊಂದಿಗೆ ಯಾವ ರೀತಿ ವರ್ತಿಸಬೇಕು, ಹೇಗೆ ಗೌರವ ನೀಡಬೇಕೆಂಬುದನ್ನು ಆಗಿನ ಕಾಲದಲ್ಲಿಯೇ ಕವಿಗಳು ತಮ್ಮ ಕಾವ್ಯಗಳ ಮೂಲಕ ತಿಳಿಸಿ ಕೊಟ್ಟಿದ್ದಾರೆ. ಇಂತಹ ಕಾವ್ಯಗಳು ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.ವಿದ್ಯಾರ್ಥಿಗಳಿಗೆ ಪ್ರಾಚೀನ ಕಲೆಯಾದ ಗಮಕ ಕಲೆಯ ಬಗ್ಗೆ ಉದಾಹರಣೆಯಾಗಿ ತಿಳಿಸಿ, ಕುಮಾರವ್ಯಾಸ ಭಾರತ ಹಾಗೂ ಹರಿಶ್ಚಂದ್ರ ಕಾವ್ಯದ ಪ್ರಸಂಗಗಳ ಗಾಯನ ಮಾಡಿ, ಅಲ್ಲಲ್ಲಿ ಚುಟುಕಾಗಿ ವ್ಯಾಖ್ಯಾನ ನೀಡಿದರು.
ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ, ಪ್ರಾಚಾರ್ಯ ಡಾ. ರಾಚೇಗೌಡ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಾಗ ಪ್ರತಿಭೆ ಹೊರಸೂಸಲು ಸಹಕಾರಿ ಎಂದು ನುಡಿದರು.
ಕನ್ನಡ ಸಂಘದ ಮುಖ್ಯಸ್ಥ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್ ಇದ್ದರು. ಇದೇ ಸಂದರ್ಭದಲ್ಲಿ ಗಣೇಶ್ ಉಡುಪ ಅವರನ್ನು ನಿರ್ದೇಶಕ ಡಾ. ರಾಚೇಗೌಡ ಸನ್ಮಾನಿಸಿದರು. ವಿದ್ಯಾರ್ಥಿಗಳಿಂದ ಮುಖಾಮುಖಿ ಗೀತಗಾಯನ, ಏಕ ಪಾತ್ರಾಭಿನಯ, ಮಿಮಿಕ್ರಿ ಅಂತಿಮ ಸ್ಪರ್ಧೆ ನಡೆಯಿತು. ಕಾಲೇಜು ಪ್ರಾಂಶುಪಾಲ ಶಾಮರಾಜ್ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು.