ಯುನೈಟೆಡ್ ಶಾಲೆಯಲ್ಲಿ ಮಕ್ಕಳಿಗೆ ಮಾನಸಿಕ, ದೈಹಿಕ ಹಿಂಸೆ
ಕನ್ನಡಪ್ರಭವಾರ್ತೆ ಹಾಸನ ಮಾ 21
ನಗರದ ಯುನೈಟೆಡ್ ಪ್ರೌಢ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಟಿಸಿ (ವರ್ಗಾವಣೆ ಪತ್ರ) ಕೊಟ್ಟು ಬೇರೆ ಶಾಲೆಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದು ಶಾಲೆಯಿಂದ ಅನ್ಯಾಯಕ್ಕೆ ಒಳಗಾದ ನೊಂದ ಪೋಷಕ ಕೆ.ಎಂ.ಪ್ರಕಾಶ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪುತ್ರ ಎಚ್.ಪಿ. ಲಿಖಿತ್ ಬೇಬಿ ಸಿಟಿಂಗ್ಗೆ 2001-02ರಲ್ಲಿ ಯುನೈಟೆಡ್ ಶಾಲೆಗೆ 40 ಸಾವಿರ ರು. ಡೊನೇಷನ್ ಹಾಗೂ ಮಾಸಿಕ 1.500 ರು.ಗಳನ್ನು ನೀಡಿ ಸೇರಿಸಿದ್ದೆ. ಒಟ್ಟಾರೆಯಾಗಿ 4.40 ಲಕ್ಷ ರು.ಗಳ ಡೊನೇಶನ್ ಹಾಗೂ ಮಾಸಿಕ ಫೀಜು ಪಾವತಿಸಿ 2012ನೇ ಸಾಲಿನವರೆಗೆ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. 2012ರಲ್ಲಿ 9ನೇ ತರಗತಿಗೆ ದಾಖಲಾಗುವ ಸಂದರ್ಭದಲ್ಲಿ ನನ್ನಿಂದ ಡೋನೇಷನ್ ಹಾಗೂ 6 ತಿಂಗಳ ಶುಲ್ಕ ಒಟ್ಟಿಗೆ ಪಡೆದು ದಾಖಲಿಸಿ ಕೊಂಡಿದ್ದಾರೆ.
ಶಾಸ್ತಾ ಪಬ್ಲಿಕ್ ಶಾಲೆಗೆ ದಾಖಲು: ನಂತರ ಶಾಲೆ ಮುಖ್ಯ ಶಿಕ್ಷಕಿ, ಕಾರ್ಯದರ್ಶಿಯನ್ನು ಭೇಟಿ ಮಾಡುವಂತೆ ತಿಳಿಸಿದ್ದರು. ಅದರಂತೆ ನಾನು ಭೇಟಿ ಮಾಡಿದ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಮುಖ್ಯಶಿಕ್ಷಕಿಯರು ನಿಮ್ಮ ಮಗ ವಿದ್ಯಾಭ್ಯಾಸದಲ್ಲಿ ಹಿಂದಿದ್ದು, ನಮ್ಮ ಶಾಲೆಯ ಘನತೆ ಹಾಗೂ ಗೌರವ ಹಾಳು ಮಾಡುತ್ತಿದ್ದಾನೆ. ಆದ್ದರಿಂದ ನಿಮ್ಮ ಮಗನನ್ನು ಶಾಸ್ತಾ ಪಬ್ಲಿಕ್ ಶಾಲೆಗೆ ದಾಖಲು ಮಾಡುತ್ತೇವೆ. ಆದರೆ ಪಾಠ ಪ್ರವಚನ ನಮ್ಮ ಶಾಲೆಯಲ್ಲಿಯೇ ಪಡೆಯುತ್ತಾನೆ. ಅದಕ್ಕೆ ನೀವು ಶಾಸ್ತಾ ಪಬ್ಲಿಕ್ ಶಾಲೆಗೆ ಹೆಚ್ಚುವರಿಯಾಗಿ 5 ಸಾವಿರ ರು. ಪಾವತಿಸುವಂತೆ ಸೂಚಿಸಿದರು.
ಅದಕ್ಕೆ ನಾನು ನನ್ನ ಮಗ ಬೇಬಿ ಸೀಟಿಂಗ್ನಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಈಗ ಈ ರೀತಿ ಹೇಳುತ್ತಿದ್ದಾರೆ ನಾನು ಹಣಕಟ್ಟುವುದಿಲ್ಲ ಎಂದೆ. ಅದಕ್ಕೆ ನನ್ನ ಮಗನನ್ನು ಎಲ್ಲ ಮಕ್ಕಳಿಂದ ಬೇರೆ ಒಂಟಿಯಾಗಿ ಕೂರಿಸಿ ನಿಂದಿಸಿ ಮಾನಸಿಕವಾಗಿ ದೌರ್ಜನ್ಯ ಎಸಗಿದ್ದರು.
ಇದರಿಂದ ಅವನ ಶಾಲೆಗೆ ಹೋಗುವುದಿಲ್ಲ ಎಂದು ಮಗ ಪಟ್ಟು ಹಿಡಿದ. ಆಗ ಶಾಲೆಗೆ ಹೋಗಿ ವಿಚಾರಿಸಿದಾಗ ಶಾಲೆಯವರು ಟಿಸಿ ತೆಗೆದುಕೊಂಡು ತೆರಳುವಂತೆ ಸೂಚಿಸಿದರು. ನಂತರ ಟಿಸಿ ಕೇಳಿದಾಗ ಕೊಡುವುದಿಲ್ಲ.ನಡತೆ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಪ್ರಮಾಣ ಪತ್ರ ಮಾತ್ರ ನೀಡುತ್ತೇವೆ. ಬೇರೆ ಶಾಲೆಯವರು ಟಿಸಿ ಕೇಳಿದಾಗ ಮಾತ್ರ ನೀಡುತ್ತೇವೆ ಎಂದು ಉತ್ತರಿಸಿದರು.
ಇಲಾಖೆಯಿಂದ ಯಾವುದೇ ಕ್ರಮವಿಲ್ಲ: ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಲೆಯ ವಿರುದ್ಧ ದೂರು ನೀಡಿದೆ. ಇಲ್ಲಿಂದ ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ ಇನ್ನೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ.
ಉಪನಿರ್ದೇಶಕ ಕಚೇರಿಯ ವಿದ್ಯಾಧಿಕಾರಿ ಲತಾ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿದ್ದರು. ಆದರೆ ಅವರು ಯಾವುದೇ ವಿಚಾರಣೆ ನಡೆಸದಿದ್ದರೂ ಇವರು ನೇಮಕಗೊಳ್ಳುವ ಒಂದು ದಿನ ಮೊದಲು ಶಾಸ್ತಾ ಶಾಲೆಗೆ ಭೇಟಿ ನೀಡಿರುವುದಾಗಿ ವರದಿ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದರು.
ಅವರ ವರದಿಯಂತೆ 2010-11ರಲ್ಲಿ 10ನೇ ತರಗತಿಗೆ ಯುನೈಟೆಡ್ ಶಾಲೆಯಿಂದ 8 ಮಕ್ಕಳು, 2011-12ರಲ್ಲಿ 11 ಮಕ್ಕಳು ಮತ್ತು 2012-13ರಲ್ಲಿ 10 ಮಕ್ಕಳು ದಾಖಲಾಗಿರುವುದು ಕಂಡು ಬಂದಿರುವುದಾಗಿ ನಮೂದಿಸಿದ್ದಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನಿಯಮಾನುಸಾರ ಅನುಮತಿ ಪಡೆದಿಲ್ಲ ಎಂದಿದ್ದಾರೆ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಕಾರಣ ನನ್ನ ಮಗನಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯುನೈಟೆಡ್ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಳಿಕೆಯನ್ನು ಮಾತ್ರ ಸಲ್ಲಿಸಿದ್ದು, ಅದರಲ್ಲಿ ನನ್ನ ಮಗನ ಅಶಿಸ್ತು, ಸಹಪಾಟಿಗಳೊಂದಿಗೆ ಅಸಭ್ಯ ವರ್ತನೆಗಳ ಬಗ್ಗೆ ದೂರು ಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ತಾಯಿಯ ಸಮ್ಮುಖದಲ್ಲಿ ತಿಳಿವಳಿಕೆ ನೀಡಿದ್ದರೂ ಬದಲಾವಣೆಗಳು ಕಂಡು ಬಂದಿಲ್ಲ. ಆದರೆ ಈ ಸಂಬಂಧ ನನಗೆ ಯಾವುದೇ ನೊಟೀಸ್ ಬಂದಿಲ್ಲ ಎಂಸಿದರು.
ಶಾಲೆ ಆಡಳಿತ ಮಂಡಳಿಯೊಂದಿಗೆ ಷಾಮೀಲು: ನಂತರ ಉಪನಿರ್ದೇಶಕರಾಗಿ ಬಂದ ಬಸವರಾಜು ಅವರು, ವಿದ್ಯಾಧಿಕಾರಿ ಭಾನುಮತಿ ಅವರಿಗೆ ಈ ವಿಚಾರವಾಗಿ ಕೂಲಂಕುಶ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಅವರು ತನಿಖೆ ನಡೆಸಿ ನನ್ನ ಮಗನ ನಡತೆ ಸರಿ ಇಲ್ಲ ಎಂದು ವರದಿ ನೀಡಿಲ್ಲ. ಶೇ.50ಕ್ಕಿಂತ ಕಡಿಮೆ ಪಡೆದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಯುನೈಟೆಡ್ ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಯ ಆಡಳಿತ ಮಂಡಳಿಯೊಂದಿಗೆ ಷಾಮೀಲಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ, ಶಾಲೆಯಿಂದಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಶಾಲೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.