ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ತರಗತಿ ಬಹಿಷ್ಕಾರ

Parashurama
Updated On : 25 Mar 2013, 10:26 am

ಕ.ಪ್ರ. ವಾರ್ತೆ ಹಾಸನ ಮಾ. 25
ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಸೋಮವಾರ ತರಗತಿಗಳನ್ನು ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಧರಣಿ ನಡೆಸಿ, ಕುಲಪತಿಗಳು ಸ್ಥಳಕ್ಕಾಗಮಿಸಿ ಮೂಲ ಸೌಲಭ್ಯಗಳನ್ನು ಒದಗಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ದೀರ್ಘಕಾಲದಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಒಳಗಾಗಿದ್ದೇವೆ. ಕಾಲೇಜಿನಲ್ಲಿ ಕುಡಿಯುವ ನೀರಿಲ್ಲದೆ ತೊಂದರೆ ಉಂಟಾಗಿದ್ದು, ನೀರಿಗಾಗಿ ಹಾಹಾಕರ ಪಡುವಂತಾಗಿದೆ. ಅಷ್ಟೇ ಅಲ್ಲದೆ ಕಾಲೇಜಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗಷ್ಟೆ ಅಲ್ಲದೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಬ್‌ಗಳಲ್ಲಿ ಸಮಸ್ಯೆ ಉಂಟಾಗಿದೆ. ಇರುವಂತಹ ಲ್ಯಾಬ್‌ನಲ್ಲಿ ಉಪಕರಣಗಳು ಇಲ್ಲದೆ ವಿದ್ಯಾರ್ಥಿಗಳು ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ನಾತಕೋತ್ತರ ಕೇಂದ್ರದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿವೆ ಎಂದು ದಾಖಲಾತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ ಪದೇ ಪದೆ ಆಗುತ್ತಿರುವ ಲೋಡ್ ಶೆಡ್ಡಿಂಗ್‌ಗೆ ಪರ್ಯಾಯ ವ್ಯವಸ್ಥೆಯಾಗಿ ಯುಪಿಎಸ್ ಹಾಕಿಸುವುದಾಗಿ ಸ್ನಾತಕೋತ್ತರ ಕೇಂದ್ರದ ಡೀನ್ ಅವರು ಈ ಹಿಂದೆ ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೂ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಕಾಲೇಜಿಗೆ ನ್ಯಾಕ್ ಕಮಿಟಿಯವರು ಬರುತ್ತಾರೆ ಎಂದು ಕಾಲೇಜಿಗೆ ಬಣ್ಣವನ್ನು ಮಾಡಿಸಿ ಸಿಂಗಾರಗೊಳಿಸಲಾಗುತ್ತಿತ್ತು. ಆದರೆ ಅವರು ಬರುವುದಿಲ್ಲ ಎಂದು ಕಾಲೇಜಿಗೆ ಬಣ್ಣ ಮಾಡಿಸುತ್ತಿದ್ದ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಲೇಜಿನ ಮುಂಭಾಗ ಇರುವ ಬೋರ್ಡ್‌ನಲ್ಲಿ ಕಾಲೇಜಿನ ಹೆಸರನ್ನು ಬರೆಸಿಲ್ಲ. ನ್ಯಾಕ್ ಕಮಿಟಿಯವರನ್ನು ಮೆಚ್ಚಿಸುವುದಕ್ಕಾಗಿ ನಾನಾ ಕಸರತ್ತನ್ನು ನಡೆಸಿ ಕೊನೆಗೆ ಅರ್ಧಕ್ಕೆ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದ್ದಾರೆ ಎಂದು ದೂರಿದರು.
ಕಾಡುಪ್ರಾಣಿಗಳ ಕಾಟ: ಇನ್ನು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ನಿಲಯವು ನಗರದಿಂದ ಸುಮಾರು 7 ಕಿಮೀ ನಷ್ಟು ದೂರದಲ್ಲಿದೆ. ಅರಣ್ಯದೊಳಗೆ ವಿದ್ಯಾರ್ಥಿ ನಿಲಯ ಇರುವುದರಿಂದ ಬೆಳಗಿನ ಸಮಯದಲ್ಲಿಯೇ ನರಿ, ಕಾಡುಹಂದಿ, ಕಾಡುಬೆಕ್ಕು ಸೇರಿದಂತೆ ಇತರೆ ಕಾಡು ಪ್ರಾಣಿಗಳು ಸಂಚರಿಸಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿವೆ. ರಾತ್ರಿ ವೇಳೆಯಲ್ಲಿ ಹಾಸ್ಟೆಲ್‌ಗೆ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡರು.
ಅಶುದ್ಧ ನೀರು: ವಿದ್ಯಾರ್ಥಿನಿಲಯದಲ್ಲಿ ಅಳವಡಿಸಿರುವ ಓವರ್ ಹೆಡ್ ಟ್ಯಾಂಕ್‌ಗಳು ಹಾಗೂ ನೆಲಮಟ್ಟದ ನೀರು ಶೇಖರಣ ತೊಟ್ಟಿಗಳು ಶಿಥಿಲಗೊಂಡು ನೀರು ಕಲುಷಿತವಾಗಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ. ಆದರೂ ಸಹ ವಿದ್ಯಾರ್ಥಿ ನಿಲಯದಲ್ಲಿ ಇದೇ ನೀರನ್ನು ಈಗಲು ಬಳಸಲಾಗುತ್ತಿದೆ. ಈ ವಿಷಯವನ್ನು ಈ ಹಿಂದೆಯೇ ವಿದ್ಯಾರ್ಥಿ ಕ್ಷೇಮಪಾಲಕರ ಗಮನಕ್ಕೆ ತರಲಾಗಿದೆ. ಈ ಅನಾರೋಗ್ಯಕರ ನೀರಿನ ಸಮಸ್ಯೆಯನ್ನು ವಿಶ್ವವಿದ್ಯಾನಿಲಯದ ಆಡಳಿತ ವರ್ಗವು ಉಪೇಕ್ಷೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ಹಾಸ್ಟೆಲ್‌ನಲ್ಲಿರುವ ಮಂಚ, ಕುರ್ಚಿಗಳು ಮುರಿದು ಹೋಗಿವೆ ಎಂದು ದೂರಿದರು.
ಎಲ್ಲಾ ಸಮಸ್ಯೆಗಳ ಅರಿವು ವಿಶ್ವವಿದ್ಯಾನಿಲಯದ ಆಡಳಿತ ವರ್ಗದ ಗಮನಕ್ಕೆ ಬಂದಿದ್ದರೂ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಮಸ್ಯೆಗಳನ್ನು ಪರಿಹರಿಸಬೇಕಾದ ವಿಶ್ವವಿದ್ಯಾನಿಲಯವು ಮತ್ತಷ್ಟು ಸಮಸ್ಯೆಗಳು ಉಲ್ಬಣಗೊಳ್ಳುವಂತೆ ಮಾಡಿದೆ. ಆದ್ದರಿಂದ ಕೂಡಲೇ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ನಾಗರಾಜು, ಗಿರೀಶ್, ಮಹೇಶ್, ಅಯ್ಯಪ್ಪ, ಆನಂದ್, ನವೀನ್ ಕುಮಾರ್, ವಂಶಿ, ಶಶಿಧರ್, ನಿಂಗರಾಜು, ವಿಜಯ್ ಕುಮಾರ್, ಗಂಗಾಧರ್, ಜಗದೀಶ್, ತೇಜು, ಮಂಜುನಾಥ್, ಪ್ರವೀಣ್, ಕಿರಣ್, ಮೋಹನ್, ರಾಜು, ರಮೇಶ್, ಮುರಳಿ, ಶಂಕರ್, ಮನೋಹರ್, ಸುರೇಶ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments