ವಿಜೃಂಭಣೆ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ
ಹೊಳೆನರಸೀಪುರ, ಮಾ.25
ಭಕ್ತಿ-ಧರ್ಮ ಮತ್ತು ಅಧ್ಯಾತ್ಮ ವೈರಾಗ್ಯಗಳ ಧರ್ಮಕ್ಷೇತ್ರವೆನಿಸಿ, ಧರ್ಮಶೃಂಗದ ಸ್ಥಳವೆಂಬ ಪುರಾಣವನ್ನೂ ಹೊಂದಿ, ವಶಿಷ್ಠ ಮುನಿಗಳಿಗೆ ದರ್ಶನ ಭಾಗ್ಯವನ್ನಿತ್ತ ಕ್ಷೇತ್ರವೆಂಬ ಹೆಗ್ಗಳಿಕೆಯಿಂದ ಭಕ್ತಿವರ್ಧನ ಕ್ಷೇತ್ರವೆಂದೂ ಹೆಸರಾಗಿರುವ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ರಥೋತ್ಸವವು ನಾಡಿನ ಮೂಲೆಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಬಣ್ಣ ಬಣ್ಣದ ಬಟ್ಟೆ ಹಾಗೂ ವಿಧ ವಿಧವಾದ ಹೂವುಗಳಿಂದ ಸಿಂಗಾರಗೊಂಡಿದ್ದ ಬ್ರಹ್ಮರಥ, ಸಕಲ ಪೂಜಾ ವಿಧಿ ವಿಧಾನಗಳ ಅರ್ಪಣೆ, ಬೃಹತ್ ನಗಾರಿಯ ಸದ್ದು ಕೇಳುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತಾದಿಗಳು ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ನರಸಿಂಹದೇವರನ್ನು ಕೋರಿ ಬಾಳೆ ಹಣ್ಣು ಹಾಗೂ ಜವನವನ್ನು ರಥಕ್ಕೆ ತೂರಿ ಇಲ್ಲಿನ ಕೋಟೆಯ ನಾಲ್ಕು ರಾಜಬೀದಿಗಳಲ್ಲಿ ಸಕಲ ಭಕ್ತಿ ಭಾವದೊಂದಿಗೆ ಬ್ರಹ್ಮರಥವನ್ನು ಎಳೆದು ಕೃತಾರ್ಥರಾದರು.
ರಥೋತ್ಸವದ ಸಂದರ್ಭದಲ್ಲಿ ಆಚರಿಸಲ್ಪಡುವ ಹೋಳಿ ಹಬ್ಬದ ಸಲುವಾಗಿ ನೂರಾರು ಯುವಕರ ಗುಂಪುಗಳು ಪರಸ್ಪರ ಬಣ್ಣ ಬಳಿದುಕೊಂಡು ಅಡ್ಡಾಡುತ್ತಿದ್ದ ಕಾರಣದಿಂದಾಗಿ ಜಾತ್ರೆಗೆ ಹೊರಗಿನಿಂದ ಆಗಮಿಸಿದ್ದ ಭಕ್ತರು ಬಣ್ಣ ಬಳಿಯಬಹುದೆನ್ನುವ ಆತಂಕಕ್ಕೆ ಒಳಗಾಗಿದ್ದು ಕಂಡುಬಂತು. ಅಲ್ಲದೇ ಹಿಂದೆ ಎಂದೂ ಇಲ್ಲದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದ ಸಂದರ್ಭದಲ್ಲಿ ಪೊಲೀಸರನ್ನು ನಿಯೋಜಿಸಿಸಲಾಗಿತ್ತು. ರಥೋತ್ಸವದ ಸಂದರ್ಭದಲ್ಲಿ ಶಾಸಕ ಎಚ್.ಡಿ.ರೇವಣ್ಣ, ಭವಾನಿ, ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ, ಗೌಡರ ಪುತ್ರಿ ಡಾ.ಅನುಸೂಯ, ರೇವಣ್ಣ ಪುತ್ರರಾದ ಸೂರಜ್, ಪ್ರಜ್ವಲ್, ಅಲ್ಲದೇ ಕಾಂಗ್ರೆಸ್ನ ಅನುಪಮ, ತಹಸೀಲ್ದಾರ್ ಈಶ್ವರಪ್ಪ ಮೊದಲಾದ ಗಣ್ಯರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.