ಹಕ್ಕುದಾರಿಕೆಯಿಂದ ಕಡ್ಡಾಯ ಮತದಾನ ಮಾಡಿ: ಶಿವಣ್ಣ
ಕನ್ನಡಪ್ರಭ ವಾರ್ತೆ ಹಾಸನ ಮಾ. 25
ಪ್ರತಿ ಮತದಾರ ಒಬ್ಬ ಗ್ರಾಹಕನಾಗಿ ತಮ್ಮ ಹಕ್ಕು ಮತ್ತು ಜವಾಬ್ದಾರಿಯನ್ನು ಅರಿತು ಕಡ್ಡಾಯವಾಗಿ ಮತದಾನ ಮಾಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಪಿ. ಶಿವಣ್ಣ ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಮತ್ತು ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದ ಕಂದಾಯ ಭವನದಲ್ಲಿ ಜರುಗಿದ ಮತದಾರ ಗ್ರಾಹಕರಿಗೆ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ಭಾರತೀಯ ಪ್ರಜೆ ಮತದಾನ ಮಾಡಲು ಭಾವಚಿತ್ರ ಹೊಂದಿರುವ ಗುರುತಿನ ಕಾರ್ಡ್ ಹೊಂದಿರಬೇಕು. ಕಾರ್ಡ್ ಪಡೆದಿದ್ದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಿದ್ದು ಗ್ರಾಹಕರು ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ ಮತ ಚಲಾಯಿಸಿ ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಬಳಕೆದಾರರ ವೇದಿಕೆ ಅಧ್ಯಕ್ಷ ಎಸ್. ಬೋರೇಗೌಡ ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರದಿಂದ ಖರೀದಿಸಬೇಕು. ತೆರಿಗೆ ಉಳಿಸುವ ಉದ್ದೇಶದಿಂದ ಕಳ್ಳ ಸಂತೆಯಲ್ಲಿ ಯಾವುದೇ ವಸ್ತು ಖರೀದಿಸಬಾರದು ಎಂದರಲ್ಲದೆ, ಖರೀದಿ ಮಾಡಿದ ವಸ್ತುವಿನಲ್ಲಿ ದೋಷ ಕಂಡು ಬಂದಲ್ಲಿ ನಿಗದಿತ ಸಮಯದೊಳಗೆ ದೂರು ದಾಖಲಿಸಬೇಕು. ನಗರ ಪ್ರದೇಶದ ಜನತೆ ಉದಾಸೀನ ಮಾಡದೆ ಮತದಾನದ ಹಕ್ಕು ಚಲಾಯಿಸುವಂತೆ ತಿಳಿಸಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಜಿ.ಎನ್. ನರಸಿಂಹಮೂರ್ತಿ ಮಾತನಾಡಿ, ಪೊಟ್ಟಣ ಸಾಮಗ್ರಿಗಳ ಮೇಲೆ ನಿಯಮಾನುಸಾರ ಅಗತ್ಯವಾದ ಘೋಷಣೆಗಳು ಇಲ್ಲದಿರುವ ಬಗ್ಗೆ ಇಲಾಖೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು..
ಜಿಲ್ಲಾ ಬಳಕೆದಾರರ ರಕ್ಷಣಾ ಪರಿಷತ್ ಸದಸ್ಯ ಸುರೇಶ್ ಇದ್ದರು. ಅನಂತರಾಮು ಸ್ವಾಗತಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.