ಹೊರಜಿಲ್ಲೆಗೆ ಮೇವು ಅಕ್ರಮ ಸಾಗಣೆ: ಆರೋಪ
ಕನ್ನಡಪ್ರಭ ವಾರ್ತೆ ಬೇಲೂರು ಮಾ. 25
ತಾಲೂಕಿನಿಂದ ಹೊರ ಜಿಲ್ಲೆಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಜಾನುವಾರುಗಳ ಮೇವು ಸಾಗಾಣಿಕೆಯಾಗುತ್ತಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸದ್ಯ ತಾಲೂಕಿನಲ್ಲಿ ತೀವ್ರ ಬರದ ಛಾಯೆಯಿದ್ದರೂ ತಾಲೂಕು ತಹಸೀಲ್ದಾರ್ ತಮಗೆ ಏನು ತಿಳಿದಿಲ್ಲ ಎಂದು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಪಕ್ಕದ ಚಿಕ್ಕಮಗಳೂರು ಜಿಲ್ಲೆಗೆ ದಿನನಿತ್ಯ ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮೇವು ಸಾಗಾಣಿಕೆ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಶುಂಠಿ ಬೆಳೆಗೆ ಎಂದು ಸಬೂಬು ಹೇಳಿ ಲೋಡ್ಗಟ್ಟಲೇ ರಾಗಿ ಹುಲ್ಲು, ಬತ್ತದ ಮೇವು ಹಾಗೂ ಮುಸುಕಿನ ಜೋಳದ ಮೇವನ್ನು ಸಾಗಾಣಿಕೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಮೇವು ಇಲ್ಲದೆ ರೈತರು ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ಅವಘಡಗಳು ತಾಲೂಕಿನಲ್ಲಿ ನಡೆಯುತ್ತಿದ್ದರೂ ತಾಲೂಕು ಆಡಳಿತ ಮಾತ್ರ ರೈತಾಪಿ ವರ್ಗದ ಹಿತವನ್ನು ಮರೆತು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಾಲೂಕಿನಲ್ಲಿ ಯಾವ ಸ್ಥಳದಲ್ಲಿ ಮೇವಿಗೆ ತೀವ್ರ ಅಭಾವ ಇರುತ್ತದೆ. ಅಂತಹ ಕಡೆಯಲ್ಲಿ ಗೋಶಾಲೆಗಳನ್ನು ತೆರೆಯುವ ಸಂಬಂಧ ಇಲಾಖೆಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾ ಗಲಿ ತಲೆ ಕೆಡಿಸಿಕೊಳ್ಳದೆ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಮಹಿಳೆಯರು,ಮಕ್ಕಳು ನೀರಿಗಾಗಿ ಮೈಲಿಗಟ್ಟಲೆ ಹೋಗ ಬೇಕಾಗಿದೆ. ಇನ್ನು ಮೇವಿಗೂ ಕ್ಷಾಮ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನ ಗ್ರಾಮೀಣ ಪ್ರದೇಶದ ಜನರ ವಾಸ್ತವಿಕತೆಯನ್ನು ಅರಿತು ಅವರ ಸಂಕಷ್ಟ ವನ್ನು ಬಗೆಹರಿಸುವಂತೆ ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.