ಚಿರತೆ ದಾಳಿ: ವ್ಯಕ್ತಿ ಗಾಯ
ಕ.ಪ್ರ.ವಾರ್ತೆ, ಹಾಸನ, ಮಾ 26
ವ್ಯಕ್ತಿಯೊಬ್ಬನಿಗೆ ಮನೆಯೊಳಗೆ ಹೊಕ್ಕಿದ್ದ ಚಿರತೆಯೊಂದು ದಾಳಿ ನಡೆಸಿ, ತೀವ್ರ ಗಾಯವಾಗಿರುವ ಘಟನೆ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಮಂಗಳವಾರ ನಡೆದಿದೆ.
ಆಲೂರು ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಕಣಿವೆ ಬಸವನಹಳ್ಳಿಯ ಅಣ್ಣೇಗೌಡ ಎಂಬುವರ ಪುತ್ರ ಕೆ.ಎ.ಗೋಪಾಲ್ (45) ಚಿರತೆ ದಾಳಿಯಿಂದ ಗಾಯಗೊಂಡವರು.
ಗೋಪಾಲ್ ತೋಟದಿಂದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಕೈಕಾಲು ತೊಳೆಯುತ್ತಿದ್ದರು. ಆಗ ಮನೆಯೊಳಗೆ ಹೊಕ್ಕಿದ್ದ ಚಿರತೆ ದಿಢೀರ್ ಆತನ ಮೇಲೆ ದಾಳಿ ನಡೆಸಿತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಗೋಪಾಲ್ ಅವರ ಪುತ್ರನೊಬ್ಬ ಅಪಘಾತದಲ್ಲಿ ಮೃತರಾಗಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಚಿರತೆ ಸಾವು: ದಾಳಿ ಸಂದರ್ಭದಲ್ಲಿ ಗೋಪಾಲ್ ತಮ್ಮಲ್ಲಿದ್ದ ಕುಡುಗೋಲಿನಿಂದ ತಿವಿದು ಚಿರತೆಯಿಂದ ಬಿಡಿಸಿ ಕೊಂಡಿದ್ದಾರೆ. ನಂತರ ಚಿರತೆ ಪೊದೆಯಲ್ಲಿ ಅಡಗಿ ಕುಳಿತುದನ್ನು ಕಂಡ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬಲೆ ಹಾಗೂ ಮತ್ತಿತರ ಉಪಕರಣ ತಂದು, ಪೊದೆ ಹತ್ತಿರ ನೋಡಿದಾಗ ಚಿರತೆ ನಿತ್ರಾಣಗೊಂಡು ಮಲಗಿದ್ದು ಕಂಡುಬಂತು. ಎಲ್ಲರೂ ಸೇರಿ ಪೊದೆಯಿಂದ ಚಿರತೆಯನ್ನು ಹೊರ ತಂದು ಪರಿಶೀಲಿಸಿದಾಗ ಚಿರತೆ ಹೊಟ್ಟೆಯ ಭಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ನಿತ್ರಾಣಗೊಂಡಿದ್ದ ಅರಣ್ಯ ಇಲಾಖೆಯವರು ನೀರು ಕುಡಿಸಿದಾಗ ಚಿರತೆ ಸಾವನ್ನಪ್ಪಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.