ಭಿತ್ತಿಪತ್ರಗಳಿಂದ ರೇಲ್ವೆ ನಿಲ್ದಾಣದ ಅಂದ ಹಾಳು
ಕ.ಪ್ರ.ವಾರ್ತೆ ಅರಸೀಕೆರೆ ಮಾ. 26
ದಕ್ಷಿಣ ನೈಋತ್ಯ ರೇಲ್ವೆ ಯೂನಿಯನ್ ಚುನಾವಣೆ ಭರಾಟೆಯಲ್ಲಿ ಸ್ಥಳಿಯ ರೈಲು ನಿಲ್ದಾಣದ ಪರಿಸರವನ್ನು ರೇಲ್ವೆ ಯೂನಿಯನ್ ಸಂಘಟನೆಗಳು ಭಿತ್ತಿ ಪತ್ರ ಮತ್ತು ಗೋಡೆ ಬರಹಗಳಿಂದ ನಿಲ್ದಾಣದ ಅಂದವನ್ನು ಹಾಳು ಗೆಡವಿರುವುದಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರುವ ಏಪ್ರಿಲ್ 26, 27 ಮತ್ತು 28 ಈ ಮೂರು ದಿನ ಸಂಘಟನೆಗಳ ಚುನಾವಣೆ ನಡೆಯಲಿದೆ. ಚುನಾವಣೆ ಅಬ್ಬರದ ಪ್ರಚಾರಕ್ಕಾಗಿ ರೇಲ್ವೆ ನಿಲ್ದಾಣದಲ್ಲಿರುವ ಸಾರ್ವಜನಿಕ ಆಸ್ತಿಗಳ ಮೇಲೆ ಗೋಡೆ ಬರಹ ಮತ್ತು ಭಿತ್ತಿ ಪತ್ರಗಳನ್ನು ಅಂಟಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದೇ ರೈಲು ನಿಲ್ದಾಣದಲ್ಲಿ ಯಾವುದೇ ಭಿತ್ತಿ ಪತ್ರ ಅಥವಾ ಗೋಡೆ ಬರಹ ಬರೆಯಬೇಕಿದ್ದರೆ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕು. ಆದರೆ ಇದನ್ನು ಗಾಳಿಗೆ ತೂರಿರುವ ಯೂನಿಯನ್ ಸಂಘಟನೆಗಳು ಇಲ್ಲಿ ಪರಿಸರ ಹಾಳುಗೆಡವಿವೆ.
ಇತ್ತೀಚೆಗಷ್ಟೆ ಇಲಾಖೆ ಮೇಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಲಕ್ಷಾಂತರ ರು.ಗಳನ್ನು ವೆಚ್ಚ ಮಾಡಿ ನಿಲ್ದಾಣದ ಅಂದ ಮತ್ತು ಸ್ವಚ್ಛತೆಯನ್ನು ಹೆಚ್ಚಿಸಲಾಗಿತ್ತು. ಆದರೆ ಕೆಲವು ದಿನಗಳಿಂದ ಈ ನಿಲ್ದಾಣದಲ್ಲಿ ಯೂನಿಯನ್ ಸಂಘಟನೆಗಳು ಮಾಡಿರುವ ಪರಿಸರ ಮಾಲಿನ್ಯದ ಜವಾಬ್ದಾರಿಯನ್ನು ಇಲಾಖೆಯ ಅಧಿಕಾರಿಗಳು ಹೊರುತ್ತಾರೋ ಅಥವಾ ಯೂನಿಯನ್ನವರು ಹೊತ್ತುಕೊಳ್ಳುತ್ತಾರೋ ಕಾದು ನೋಡಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.