ಯುವಕನ ಕೊಲೆ: ಮಹಿಳೆ ಬಂಧನ
ಕ.ಪ್ರ.ವಾರ್ತೆ ಟಿ. ನರಸೀಪುರ ಮಾ.26
ಯುವನೋರ್ವನನ್ನು ಬರ್ಬರ ಹತ್ಯೆಗೈದು ರುಂಡ, ಮುಂಡ, ಕೈಕಾಲುಗಳನ್ನು ತುಂಡರಿಸಿ ವಿವಿಧೆಡೆ ಬೀಸಾಡಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಅರವಟ್ಟಿಗೆಕೊಪ್ಪಲು ಗ್ರಾಮದ ಲೇ. ಬೋರೇಗೌಡ ಎಂಬವರ ಪತ್ನಿ ಶಾರದಾ ಬಂಧಿತ ಆರೋಪಿ. ಅದೇ ಗ್ರಾಮದ ಈರಯ್ಯ ಎಂಬವರ ಪುತ್ರ ನಿಂಗರಾಜು (27) ಎಂಬವರನ್ನು ಕಳೆದ ಮಾ. 18 ರಂದು ಹತ್ಯೆ ಮಾಡಿ, ಕೈ, ಕಾಲು ಹಾಗೂ ದೇಹವನ್ನು ಪ್ರತ್ಯೇಕವಾಗಿ ಕತ್ತರಿಸಿ ಮೂರ್ನಾಲ್ಕು ಕಡೆ ಎಸೆದಿದ್ದರು. ಬನ್ನೂರು ಹೋಬಳಿಯ ಅರವಟ್ಟಿಗೆಕೊಪ್ಪಲು ಗ್ರಾಮದಲ್ಲಿ ಕಳೆದ ಮಾ. 18ರ ಸೋಮವಾರ ಮಹದೇಶ್ವರ ದೇವಾಸ್ಥಾನದ ಬಳಿ ಯುವನೋರ್ವನ ದೇಹದ ಸೊಂಟದ ಕೆಳಭಾಗ ಬೀಸಾಡಿದ್ದು ಪತ್ತೆಯಾಯಿತು. ಎಸ್ಪಿ ಆರ್. ದಿಲೀಪ್ ಅವರು ಕೊಲೆ ಪ್ರಕರಣವನ್ನು ಭೇದಿಸಲು ಸಿಪಿಐ ನೇತೃತ್ವದಲ್ಲಿ ತಂಡ ರಚಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.
ಅನೈತಿಕ ಸಂಬಂಧ ಕಾರಣ: ಯುವಕನ ಬರ್ಬರ ಹತ್ಯೆಗೆ ಅನೈತಿಕ ಸಂಬಂಧವೇ ಕಾರಣವೆಂದು ಆರೋಪಿ ಮಹಿಳೆ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣದ ಜಾಡು ಹಿಡಿದು ಹೊರಟ ಬನ್ನೂರು ಪೊಲೀಸರು ಯುವಕನ ಹತ್ಯೆ ಮಾಡಿದ್ದ ಆರೋಪಿ ಶಾರದಾ ಎಂಬಾಕೆಯನ್ನು ಬಂಧಿಸಿ, ತನಿಖೆಗೊಳಪಡಿಸಿದರು. ತನಿಖೆ ಸಂದರ್ಭದಲ್ಲಿ ಕೊಲೆಯಾದ ಯುವಕನ ಪತ್ನಿ ನಿತ್ಯ ಜಗಳವಾಡುತ್ತಿದ್ದಳು. ನಡುರಾತ್ರಿಯಲ್ಲಿ ಮನೆಗೆ ಬರುತ್ತಿದ್ದ ಆತ ಲೈಂಗಿಕ ಕ್ರಿಯೆಗೆ ಪ್ರತಿನಿತ್ಯ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಮಾ. 13 ರಂದೇ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾಳೆ.
ಕೊಲೆ ಮಾಡಿದ ನಂತರ ಹರಿತವಾದ ಚೂರಿಯಿಂದ ದೇಹದ ರುಂಡ, ಮುಂಡ, ಕೈ ಹಾಗೂ ಕಾಲು ಕತ್ತರಿಸಿ, ಬೇರ್ಪಡಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ತನ್ನ ಮಗ ಸಾಗರ್ (13) ಸಹಕಾರದೊಂದಿಗೆ ಸೈಕಲ್ನಲ್ಲಿ ಸಾಗಿಸಿ, ಕಾಲು ಮತ್ತು ಸೊಂಟದ ಭಾಗವನ್ನು ಅರವಟ್ಟಿಗೆಕೊಪ್ಪಲಿನ ಪಾಳು ಜಮೀನಿನಲ್ಲಿ, ರುಂಡ ಹಾಗೂ ಮುಂಡಗಳನ್ನು ಬೊಮ್ಮನಹಳ್ಳಿ ಗ್ರಾಮದಲ್ಲಿರುವ ವಿಲ್ಸನ್ ಡಿಸ್ಟಲರೀಸ್ನ ಮಡ್ಡಿ ತೊಟ್ಟಿಯೊಳಗೆ ಸಾಕ್ಷ್ಯ ನಾಶ ಮಾಡಲು ಬಿಸಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಸಹಕರಿಸಿದ ಅವರ ಪುತ್ರ 9 ತರಗತಿಯ ವಿದ್ಯಾರ್ಥಿ ಸಾಗರ್ನನ್ನು ಬಂಧಿಸಿದ್ದು, ಆರೋಪಿಗಳಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಏ. 9 ರವರಗೆ ನ್ಯಾಯಾಲಯವು ನ್ಯಾಯಾಂಗ ಬಂಧನದಲ್ಲಿಡುವಂತೆ ಸೂಚಿಸಿದೆ. ಎಎಸ್ಪಿ ಅಧೀಕ್ಷಕ ಮೋಹನ್ರೆಡ್ಡಿ, ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಎಸ್.ಜಿ. ವಿಜಯ್ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಎಸ್. ಸುಂದರರಾಜ್, ಪಿಎಸ್ಐ ಆರ್. ಸಂತೋಷ್ ಕಶ್ಯಪ್, ತಲಕಾಡು ಪಿಎಸ್ಐ ಪಿ.ಎನ್. ಅನಿಲ್ಕುಮಾರ್, ಪೇದೆಗಳಾದ ಶಾಂತಲಿಂಗಯ್ಯ, ಬಿ.ಆರ್. ನಾಗರಾಜು, ರಾಜೇಂದ್ರ, ಪಚ್ಚೇಗೌಡ, ನಾಗೇಂದ್ರ, ಅರುಣ, ಉಮೇಶ್, ಅಶ್ವಿನಿ ಹಾಗೂ ಚಾಲಕ ಮಂಜುನಾಥ್ ಅವರು ಪ್ರಕರಣವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.