ವಿದ್ಯುತ್ ಕಂಬಕ್ಕೆ ಡಿಕ್ಕಿ: ಮಗುಚಿ ಬಿದ್ದ ಗೂಡ್ಸ್ ವಾಹನ
ಕ.ಪ್ರ.ವಾರ್ತೆ ಜಾವಗಲ್ ಮಾ. 26
ಸಮೀಪದ ಸಂಕೀಹಳ್ಳಿ ಗ್ರಾಮದ ಮುಂಭಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಟಾಟಾ ಗೂಡ್ಸ್ ವಾಹನ ಗುದ್ದಿ ಮಗುಚಿ ಬಿದ್ದಿದೆ. ಭಾನುವಾರ ರಾತ್ರಿ ಸಂಕೀಹಳ್ಳಿ ಸೇತುವೆ ಕಾಮಗಾರಿ ಬಳಿ ಚಿಕ್ಕಮಗಳೂರಿನಿಂದ ತರೀಕೆರೆಗೆ ಹೋಗುತ್ತಿದ್ದ ಟಾಟಾ ಗೂಡ್ಸ್ ವಾಹನ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದಾಗಿ ರಸ್ತೆಯ ಬಲ ಭಾಗದ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ವಾಹನ ಜಖಂಗೊಂಡಿದೆ.
ಚಾಲಕ ಷಫೀಉಲ್ಲಾನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವಾಹನ ವಿದ್ಯುತ್ ಕಂಬಕ್ಕೆ ಗುದ್ದಿದ ರಭಸಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು ಭಾರೀ ಶಬ್ಧ ಉಂಟಾಯಿತು. ಒಂದು ವೇಳೆ ವಿದ್ಯುತ್ ಸಂಪರ್ಕವಿದ್ದಲ್ಲಿ ಭಾರೀ ಅನಾಹುತವಾಗುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದರು.
ಈ ಬಗ್ಗೆ ಕೆಪಿಟಿಸಿಎಲ್ನ ಮಹೇಶ್ ಜಾವಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಚಾಲಕನನ್ನು ವಶಕ್ಕೆ ತೆಗೆದು ಕೊಂಡು ಪ್ರಕರಣ ದಾಖಲಿಸಿದ್ದಾರೆ.
ಸಂಕೀಹಳ್ಳಿ ಮುಂಭಾಗ ಎನ್.ಎಚ್. 234ನ ಸೇತುವೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಜಾಗದಲ್ಲಿ ಅಡ್ಡಗೋಡೆಯನ್ನಾಗಲಿ ಸೂಚನಾ ಫಲಕವನ್ನಾಗಲಿ ಹಾಕದಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಮಾರ್ಗದಲ್ಲಿ ಪ್ರತಿ ದಿನ ನೂರಾರು ವಾಹನಗಳು ಚಲಿಸುತ್ತಿದ್ದು ಭಾರಿ ಧೂಳೆಬ್ಬಿಸುತ್ತಿದ್ದರೂ ನೀರು ಹಾಕಿ ಕೊಂಡು ಕೆಲಸ ಮಾಡುತ್ತಿಲ್ಲ. ವಾಹನಗಳು ಚಲಿಸುವಾಗ ಹಿಂಬದಿ ವಾಹನಗಳಿಗೆ ರಸ್ತೆ ಕಾಣದಂತೆ ದೂಳು ಏಳುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.