ಹೊಳೆನರಸೀಪುರ: ಆಲಿಕಲ್ಲು ಮಳೆ
ಹೊಳೆನರಸೀಪುರ: ಪಟ್ಟಣದಲ್ಲಿ ಮಂಗಳವಾರ ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ದಿಢೀರನೆ ಆಲಿಕಲ್ಲಿನೊಂದಿಗೆ ಬಿದ್ದ ಭಾರಿ ಮಳೆಯಿಂದಾಗಿ ಇಲ್ಲಿನ ನಾನಾ ಬಡಾವಣೆಗಳ ಮನೆಯೊಳಗೆ ಚರಂಡಿ ನೀರು ನುಗ್ಗಿದ್ದು, ಮಳೆ ಹಾಗೂ ಗಾಳಿಯ ರಭಸಕ್ಕೆ ಮರಗಳು ಬಿದ್ದು ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಯಾಗಿದೆ.
ಇದ್ದಕ್ಕಿದ್ದಂತೆಯೇ ಭಾರಿ ಗಾತ್ರದ ಆಲಿಕಲ್ಲುಗಳೊಂದಿಗೆ ಧೋ ಎಂದು ಸುರಿಯಲಾರಂಭಿಸಿದ ಮಳೆಯಿಂದಾಗಿ, ಏಕಾಏಕಿ ಪಟ್ಟಣದ ಜನಜೀವನ ಅಸ್ತವ್ಯಸ್ಥವಾಯಿತು.
ಭಾರಿ ಮಳೆಯಿಂದಾಗಿ ಪಟ್ಟಣದ ಕಾಲುವೇಕೇರಿ ಬೀದಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಒಳಚರಂಡಿ ಹಾಗೂ ಬಾಕ್ಸ್ ಚರಂಡಿಯಿಂದ ಉಕ್ಕಿ ಹರಿಯಲಾರಂಬಿಸಿದ ಕೊಳಚೆ ನೀರು ಅಕ್ಕ ಪಕ್ಕದ ಮನೆಗಳಿಗೆಲ್ಲಾ ನುಗ್ಗಿತು. ಇದೇ ಬೀದಿಯಲ್ಲಿ ಮಳೆ ಹಾಗೂ ಗಾಳಿಯ ರಭಸಕ್ಕೆ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿ ಪಕ್ಕದ ಮನೆ ಅರ್ಧದಷ್ಟು ಹಾನಿಗೀಡಾಗಿದೆ.
ನರಸಿಂಹನಾಯಕ ನಗರ, ಆಶ್ರಯ ಮನೆಗಳ ಮೇಲ್ಚಾವಣಿ ಬಿರುಸಾದ ಗಾಳಿ ಮಳೆಗೆ ಹಾರಿ ಹೋಗಿ ಮನೆಯೊಳಗೆಲ್ಲಾ ನೀರು ನಿಂತಿದೆ. ಆಶ್ರಯ ಬಡಾವಣೆಯ ಒಳಚರಂಡಿ ಅವ್ಯವಸ್ಥೆಯಿಂದಾಗಿ ಇಲ್ಲೂ ಕೂಡ ಮನೆಗಳೊಳಗೆ ಕೊಳಚೆ ನೀರು ತುಂಬಿಕೊಂಡಿದೆ.
ಪಟ್ಟಣದ ಹಾಸನ-ಮೈಸೂರು ಮುಖ್ಯ ರಸ್ತೆಯಲ್ಲಿನ ಕಣ್ಣಿನ ಆಸ್ಪತ್ರೆಯ ಹಿಂಭಾಗದಲ್ಲಿನ ವಸತಿ ಗೃಹದ ಮೇಲೆ ಬೃಹತ್ತಾದ ನೀಲಗಿರಿ ಮರ ಉರುಳಿದೆ.
ದಿಢೀರನೆ ಸುರಿದ ಭಾರಿ ಮಳೆಗೆ ಪಟ್ಟಣದಾದ್ಯಂತ ಅಪಾರ ಪ್ರಮಾಣದ ಹಾನಿಯಾಗಿರುವ ಕುರಿತು ವರದಿಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.