ಏಕೀಕರಣಕ್ಕಾಗಿ ಹೋರಾಡಿದವರ ಸ್ಮರಣೆ ಮುಖ್ಯ'
ಚನ್ನರಾಯಪಟ್ಟಣ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಆಟೋ ಚಾಲಕರು ಮತ್ತು ಮಾಲಿಕರ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಶುಕ್ರವಾರ ಅದ್ದೂರಿ ಕನ್ನಡ ರಾಜ್ಯೋತ್ಸವ ನಡೆಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಕಚೇರಿ ಬಳಿಯಿಂದ ಕನ್ನಡಾಭಿಮಾನಿಗಳು, ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸ್ತಬ್ದ ಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ತಹಸೀಲ್ದಾರ್ ಡಾ.ನಾಗರಾಜು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಸಿಗಲು ಸಾಹಿತಿಗಳು ಹಾಗೂ ಕನ್ನಡ ಪರ ಚಳವಳಿ ಸಂಘಟನೆಗಳ ಪಾತ್ರ ಅಪಾರವಾಗಿದ್ದು, ಇಂತಹ ಅಭಿಮಾನ ಎಲ್ಲಾ ಕನ್ನಡಿಗರಲ್ಲಿ ಮೂಡಿದರೆ ನಾಡು ಉಳಿಯುತ್ತದೆ ಎಂದು ತಿಳಿಸಿದರು.
ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದವರನ್ನು ಈ ಸಂದರ್ಭದಲ್ಲಿ ನೆನೆದು ನಂತರ ಮರೆಯುವುದು ತರವಲ್ಲ ಎಂದರು. ಇದೇ ವೇಳೆ ಸಾವಯವ ಕೃಷಿಕ ಗಣೇಶ್, ಪ್ರಗತಿ ಪರ ಸಂಘಟನೆ ಪ್ರಸನ್ನ ಗಣಪತಿ ಸೇವಾ ಸಮಿತಿ, ಕನ್ನಡ ಪರ ಹೋರಾಟಗಾರ ಮಧು ಕರಡೆ, ಸರ್ಕಾರಿ ಡಿ.ಗ್ರೂಪ್ ನೌಕರ ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.