ಕನ್ನಡ ರಕ್ಷಿಸುವ ಹೊಣೆ ಕನ್ನಡಿಗರದ್ದು
ಹಾಸನ: ನಗರ ಹಾಗೂ ಜಿಲ್ಲಾದ್ಯಂತ ಶುಕ್ರವಾರ 58ನೇ ಕನ್ನಡರಾಜ್ಯೋತ್ಸವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಚನ್ನರಾಯಪಟ್ಟಣ, ಹೊಳೆನರಸೀಪುರ, ಆಲೂರು, ಅರಸೀಕೆರೆ, ಬೇಲೂರು, ಸಕಲೇಶಪುರ ಮತ್ತು ಅರಕಲಗೂಡು ತಾಲೂಕುಗಳಲ್ಲಿ ರಾಜ್ಯೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಾರಿಗೆ ಸಂಸ್ಥೆಗಳ ಬಸ್, ಆಟೋ ಮತ್ತು ದ್ವಿಚಕ್ರ ವಾಹನಗಳಲ್ಲಿ ಕನ್ನಡ ಧ್ವಜ ಮೆರೆಯಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ, ನಂತರ ನಾಡು ಹಾಗೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಕನ್ನಡ ರಕ್ಷಿಸುವ ಹೊಣೆಗಾರಿಕೆ ಎಲ್ಲ ಕನ್ನಡಿಗರ ಮೇಲಿದೆ ಎಂದು ಹೇಳಿದರು.
ವಿಶ್ವದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಆಯ್ದ ಹತ್ತು ಪ್ರಮುಖ ಭಾಷೆಗಳ ಪೈಕಿ ಕನ್ನಡ ಸಹ ಒಂದಾಗಿ ನಿಲ್ಲುತ್ತದೆ. ಕನ್ನಡದಲ್ಲಿ ರಚಿಸಿರುವ ಅನೇಕ ಗ್ರಂಥಗಳು ಇತರೆ ಭಾಷೆಗಳಿಗೆ ತರ್ಜುಮೆಗೊಂಡು ಕನ್ನಡ ಸಾಹಿತ್ಯ ದಶದಿಕ್ಕುಗಳಲ್ಲಿಯೂ ಬೆಳೆಯಲು ಕಾರಣವಾಗಿದೆ ಎಂದು ನುಡಿದರು.
ಕನ್ನಡದ ಪ್ರಥಮ ಶಿಲಾ ಶಾಸನ ಹಮ್ಮಿಡಿ ಶಾಸನ ದೊರತಿರುವುದು ಹಾಸನ ಜಿಲ್ಲೆಯಲ್ಲಿಯೇ. ಈ ಜಿಲ್ಲೆಯಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿರುವಂತಹ ಗಣ್ಯ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ನೆನೆಯುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಈ ಪೈಕಿ ಎಸ್.ಎಲ್.ಭೈರಪ್ಪ, ಅ.ನ.ಕೃ, ಎಸ್.ಕೆ.ಕರೀಂಖಾನ್, ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾಯರು, ಶಾರದಾ ಪ್ರಸಾದ್, ಹಾರ್ನಳ್ಳಿ ರಾಮಸ್ವಾಮಿ, ಕೀ.ರಂ. ನಾಗರಾಜ್, ಕ್ಯಾಪ್ಟನ್ ಗೋಪಿನಾಥ್, ಗರುಡನಗಿರಿ ನಾಗರಾಜ್, ಕ್ರಿಕೆಟಿಗ ಜಾವಗಲ್ ಶ್ರೀನಾಥ್ಸೇರಿ ನಾನಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ಬಹು ಮುಖ್ಯವಾಗಿ ಈ ರಾಷ್ಟ್ರದ ಪ್ರಧಾನ ಮಂತ್ರಿಯ ಗದ್ದುಗೆಯನ್ನು ಏರಿದ ಕನ್ನಡದ ರೈತ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಜಿಲ್ಲೆಯವರು ಎಂಬುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ ಎಂದರು.
ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಕ್ಕೆ ಭೇಟಿ ನೀಡಿ ಜನತಾ ದರ್ಶನ ನಡೆಸಿರುವುದಲ್ಲದೆ ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತ ವಹಿಸಿಕೊಂಡ ನಂತರ ಹತ್ತು ಹಲವು ಜನಪರ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಕನ್ನಡ ಪಸರಿಸಲು ಕೈಜೋಡಿಸಿ: ಸರ್ಕಾರ ನಾಡಿನ ಪ್ರತಿ ನಾಗರಿಕನ ಬದುಕು ಹಸನಾಗಿಸಲು ನಾನಾ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಬ್ಬರು ಕನ್ನಡ ನಾಡು ಕಟ್ಟುವಲ್ಲಿ ಹಾಗೂ ಅದರ ಹಿರಿಮೆಯನ್ನು ವಿಶ್ವದಾದ್ಯಂತ ಪಸರಿಸಲು ಕೈಜೋಡಿಸಬೇಕಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಕಡಿಮೆ ಮಾಡಿ ದೇಶಿಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಇಚ್ಛಾಶಕ್ತಿಯನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಎಲ್ಲಾ ಭಾಷೆ ಮತ್ತು ಭಾಷಿಕರನ್ನು ಗೌರವಿಸೋಣ, ಎಲ್ಲಾ ಭಾಷೆಯನ್ನು ಕಲಿಯೋಣ ಹಾಗೂ ಎಲ್ಲರೊಂದಿಗೂ ಸೌಹಾರ್ದಯುತವಾಗಿ ಬೆರೆಯೋಣ. ಆದರೆ ಯಾವ ಕಾರಣಕ್ಕೂ ನಮ್ಮ ಮಾತೃ ಭಾಷೆಯನ್ನು ಮರೆಯುವುದು ಬೇಡ. ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿ ವಾಣಿಯನ್ನು ಸಾರ್ಥಕ ಪಡಿಸೋಣ. ಕನ್ನಡಿಗರಾಗಿ ಕನ್ನಡಾಂಬೆಯ ಸೇವೆಗೆ ಹಾಗೂ ಕನ್ನಡ ನಾಡನ್ನು ಬಲಿಷ್ಠವಾಗಿ ಕಟ್ಟಲು ಪ್ರತಿಯೊಬ್ಬರು ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು.
ಶಾಸಕ ಎಚ್.ಎಸ್.ಪ್ರಕಾಶ್, ಪಟೇಲ್ ಶಿವರಾಂ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಇತರರು ಇದ್ದರು.