ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಲಿ
ಹೊಳೆನರಸೀಪುರ: ರಾಜ್ಯದಲ್ಲಿ ಮುಚ್ಚುವ ಸ್ಥಿತಿಯಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ ಕನ್ನಡಕ್ಕೆ ಒದಗಿರುವ ಆತಂಕವನ್ನು ದೂರಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
58ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಆಡಳಿತ ಶುಕ್ರವಾರ ಇಲ್ಲಿನ ಬಯಲುರಂಗ ಮಂದಿರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ, ಕೃಷ್ಣ ನದಿ ನೀರಿನ ಹಂಚಿಕೆ ಕುರಿತಂತೆ ನೆರೆ ರಾಜ್ಯಗಳೊಂದಿಗೆ ಹೋರಾಟ ನಡೆಯುತ್ತಿದ್ದು, ರಾಜ್ಯ ಸರ್ಕಾರ ಈ ವಿವಾದವನ್ನು ಪರಿಣಾಮಕಾರಿಯಾಗಿ ಎದುರಿಸಿ ರಾಜ್ಯದಲ್ಲಿನ ರೈತರ ಹಿತ ಕಾಯುವ ನಿಟ್ಟಿನಲ್ಲಿ ಮುಂದಾಗುವಂತೆ ಅವರು ತಿಳಿಸಿದರು. ರಾಜ್ಯದ ನೆಲ ಜಲ ಹಾಗೂ ಭಾಷೆಯ ಉಳಿವಿಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ಭಾಷೆಯ ಉಳಿವಿನ ಜೊತೆಗೆ ರಾಜ್ಯದಲ್ಲಿ ಶೇ.70ರಷ್ಟಿರುವ ಬಡಜನರ ಉದ್ಧಾರಕ್ಕಾಗಿ ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಹೇಳಿದರು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ಮಾತನಾಡಿ, ಕನ್ನಡವು ಕೇವಲ ಭಾಷೆಯಾಗಿರದೇ, ನಮ್ಮ ನಾಡಿನ ಉದಯದ ಶಕ್ತಿ ಹಾಗೂ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಉಗಮಿಸಿದ ಭಾಷಾವಾರು ಪ್ರಾಂತ್ಯದ ಪರಿಕಲ್ಪನೆಯಲ್ಲಿ ಕನ್ನಡ ಆಂತರಿಕ ಹಾಗೂ ಬಾಹ್ಯ ಶಕ್ತಿಯಾಗಿ ಪಾತ್ರ ವಹಿಸಿದೆ ಎಂದರು.
ಕನ್ನಡ ನಾಡು ಕಲೆ, ಸಂಸ್ಕೃತಿ ಸಾಮ್ರಾಜ್ಯ, ನದಿ, ಶಿಲ್ಪಕಲೆ, ಶ್ರೀಗಂಧ, ಬಂಗಾರ, ಸಾಹಿತ್ಯ, ರಾಜಕೀಯ ಕ್ಷೇತ್ರಗಳಲ್ಲಷ್ಟೇ ಅಲ್ಲದೇ, ವಿಜ್ಞಾನ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆಗೈಯುವ ಮೂಲಕ ಕನ್ನಡ ನಾಡನ್ನು ಹೆಮ್ಮೆಯಿಂದ ಗುರುತಿಸುವ ಮಟ್ಟದ ಹೆಸರನ್ನು ಗಳಿಸಿದೆ ಎಂದ ಅವರು, ಇಷ್ಟೊಂದು ಶ್ರೀಮಂತ ಹಾಗೂ ಧೀಮಂತವಾದ ವೈಭವೋಪೇತ ನಾಡಿನಲ್ಲಿ ಜನಿಸಿರುವ ನಾವುಗಳು, ಇಂದಿಗೂ ನಿರುದ್ಯೋಗ, ಅನಕ್ಷರತೆ, ಬಡತನಗಳಿಂದ ನರಳುತ್ತಿರುವ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕಾದ ಅವಶ್ಯಕತೆ ಇದೆ ಎಂದರು. ಪ್ರಧಾನ ಭಾಷಣ ಮಾಡಿದ ಉಪನ್ಯಾಸಕ ಚೌಡಯ್ಯ ಕಟ್ನವಾಡಿ ಅವರು, ಓದಿಗೆ ಮಾತ್ರ ಕನ್ನಡ. ಆದರೆ ಉದ್ಯೋಗ ನೀಡಿಕೆಯಲ್ಲಿ ಮಾತ್ರ ಕನ್ನಡಿಗರ ನಿರ್ಲಕ್ಷ ಸಲ್ಲದು ಎಂದರು. ರಾಜ್ಯದ ಗಡಿಭಾಗಗಳಲ್ಲಿ ಕನ್ನಡದ ನೆಲವನ್ನು ಅಕ್ಕ ಪಕ್ಕದ ರಾಜ್ಯಗಳ ಸ್ಥಿತಿವಂತರು ಅಕ್ರಮವಾಗಿ ಖರೀದಿಸುತ್ತಿದ್ದು, ಈ ವಿಷಯವನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿ ಇಂತಹ ಪ್ರಕರಣಗಳಲ್ಲಿ ಭಾಗಿಯಾದವರನ್ನು ಕಠಿಣವಾಗಿ ಶಿಕ್ಷಿಸುವ ದಿಟ್ಟತನ ತೊರಬೇಕಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಂಗರಾಜು ಹಾಗು ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಟ್ಟಣದ ಗ್ರೀನ್ವುಡ್ ಆಂಗ್ಲಶಾಲೆಯ ಮಕ್ಕಳು ನಡೆಸಿಕೊಟ್ಟ ಕಂಸಾಳೆ ಹಾಗೂ ಸ್ಲಂಬೋರ್ಡ್ನ ಅಂಗನವಾಡಿಯ ಪುಟಾಣಿಗಳು ಶಿಕ್ಷಕಿ ವಿಜಯಕುಮಾರಿ ತರಬೇತಿಯಲ್ಲಿ ನೀಡಿದ ಹುಲಿವೇಷ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಆದರೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಇಲಾಖೆಗಳ ಅಧಿಕಾರಿಗಳು ಹಾಜರಿದ್ದದ್ದು ಬಿಟ್ಟರೆ ಬಹುತೇಕ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ವಿವಿಧ ಕಾಲೇಜುಗಳ ಬಹುತೇಕ ಉಪನ್ಯಾಸಕರು ಗೈರು ಹಾಜರಾಗಿದ್ದರು.
ಅಲ್ಲದೇ ರಾಜ್ಯೋತ್ಸವ ಸಮಾರಂಭದಲ್ಲಿ ಕವಾಯತು ಪ್ರದರ್ಶನ ನೀಡಿದ ಮಕ್ಕಳನ್ನು ಹೊರತುಪಡಿಸಿ ಇನ್ನುಳಿದಂತೆ ಪಟ್ಟಣದ ಯಾವುದೇ ಶಾಲೆಯ ಮಕ್ಕಳೂ ಭಾಗವಹಿಸದೇ ಇದ್ದದ್ದು ಇಲ್ಲಿನ ಶಿಕ್ಷಣಾಧಿಕಾರಿಗಳ ದಕ್ಷತೆಯನ್ನು ಪ್ರಶ್ನಿಸುವಂತಿತ್ತು. ಕಾರ್ಯಕ್ರಮ ನಡೆದ ಮೈದಾನದಲ್ಲಿ ಕರವೇ ಪದಾಧಿಕಾರಿಗಳು ಬೈಕು ಹಾಗೂ ಕುದುರೆಯ ಮೇಲೆ ಕನ್ನಡ ಧ್ವಜವನ್ನು ಹಿಡಿದು ಸುತ್ತು ಹಾಕಿ ನೆರದಿದ್ದವರ ಮೆಚ್ಚುಗೆ ಗಳಿಸಿದರು.
ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಎಚ್.ಕೆ.ರಘುರಾಮ್, ತಾಪಂ ಅಧ್ಯಕ್ಷೆ ಪುಷ್ಪಾಗೌಡೇಗೌಡ, ಉಪಾಧ್ಯಕ್ಷ ಎಚ್.ಬಿ.ನಂಜುಂಡಪ್ಪ, ಎಎಸ್ಪಿ ವಿನಾಯಕ ಪಾಟೀಲ್, ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ, ಎಸ್ಸೈ ಶಿವಕುಮಾರ್ ಹಾಗೂ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಹರೀಶ್, ತಾಪಂ ಇಓ ತಮ್ಮಣ್ಣಗೌಡ, ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಎಪಿಎಂಸಿ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ಹಾಗೂ ಪುರಸಭೆ, ತಾಪಂ ಕೆಲ ಸದಸ್ಯರು ಇದ್ದರು.