ಕಲಾಕ್ಷೇತ್ರದಲ್ಲಿ ವಿಶಿಷ್ಟ ದೇಸಿ ಉತ್ಸವ ಇಂದು
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ದೇಸೀ ಸಂಸ್ಕೃತಿ ಕಲಾ ತಂಡದ ಆಶ್ರಯದಲ್ಲಿ ನ.2 ರಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಜೆ 5ಕ್ಕೆ ದೇಸಿ ಉತ್ಸವ, ಕಿರು ನಾಟಕ ರಚನಾ ಶಿಬಿರ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಜನಾರ್ದನ್ ತಿಳಿಸಿದ್ದಾರೆ.
ನಗರದ ಕಸಾಪ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಸಿ ಉತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ವಿಜಯದಬ್ಬೆ ಮತ್ತು ತಂಬೂರಿ ಮರಿಯಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಗೀತ ನಿರ್ದೇಶಕ ಹಂಸಲೇಖ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 125 ಕ್ಕೆ 125 ಅಂಕ ಪಡೆದ 8 ವಿದ್ಯಾರ್ಥಿಗಳು, ಪಿಯುಸಿಯಲ್ಲಿ ಎರಡು ಜನ, ಪಿಎಚ್ಡಿ ಪಡೆದ ಇಬ್ಬರನ್ನು ಕೂಡ ಪ್ರಶಸ್ತಿಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು. ಸಾಹಿತಿ ಹಂಸಲೇಖ ಅವರ ತಂಡ ಎರಡುವರೆ ಗಂಟೆ ಕಾಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಿರಿಯ ನಾಟಕಕಾರರು, ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬೆಳಗ್ಗೆ ನಡೆಯುವ ಕಿರು ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಕಸಾಪ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್, ಸಿ.ಕೆ. ಹರೀಶ್ ಎಸ್.ಡಿ. ರಮೇಶ್ ಇತರರು ಇದ್ದರು.
13ಕ್ಕೆ ಡಿವೈಎಫ್ಐ ಪ್ರತಿಭಟನೆ
ಹಾಸನ: ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಮತ್ತು ದುರಸ್ತಿಗೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನೇತೃತ್ವದಲ್ಲಿ ನ.13 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ನಾಗರಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಪರದಾಡುವಂತಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಸೇರಿದಂತೆ ಮುಖ್ಯರಸ್ತೆಗಳು, ರಾಜ್ಯ ಹೆದ್ದಾರಿಗಳ ಸ್ಥಿತಿಯೂ ಇದೇ ರೀತಿಯಲ್ಲಿದೆ ಎಂದು ಡಿವೈಎಫ್ಐ ಸಂಘಟನೆ ತಿಳಿಸಿದೆ.
ಹಾಸನ ನಗರದಲ್ಲಂತೂ ಬಹುತೇಕ ಎಲ್ಲಾ ರಸ್ತೆಗಳು ಗುಂಡಿಬಿದ್ದು ತೀರಾ ದುಸ್ಥಿತಿಯಲ್ಲಿವೆ. ಬೇಸಿಗೆಯಲ್ಲಂತೂ ರಸ್ತೆಗಳಲ್ಲಿ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ಇದ್ದು ಮುಖ್ಯವಾಗಿ ಧೂಳಿನಿಂದ ರಸ್ತೆ ಕಾಣದೆ ಇರುವುದು ಮಾತ್ರವಲ್ಲದೆ ಅಸ್ತಮಾ ಮುಂತಾದ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರುತ್ತಿವೆ. ನಗರದ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಿ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು.
ಡ್ರೆಸ್ ಮೇಕಿಂಗ್ ಕೌಶಲ್ಯ ಕಾರ್ಯಾಗಾರ
ಹಾರನಹಳ್ಳಿ: ಲೋಕಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಸಾಕ್ಷರತಾ ಸಮಿತಿ, ತಾಲೂಕು ಪಂಚಾಯ್ತಿ ನವಸಾಕ್ಷರರಿಗೆ ಡ್ರೆಸ್ ಮೇಕಿಂಗ್ ವೃತ್ತಿ ಕೌಶಲ್ಯ ಕಾರ್ಯಾಗಾರ ಉದ್ಘಾಟನಾ ಕಾರ್ಯವು ಹಾರನಹಳ್ಳಿ ಇಂದಿರಾನಗರದಲ್ಲಿರುವ ಅಂಗನವಾಡಿಯಲ್ಲಿ ಆಯೋಜಿಸಲಾಗಿತ್ತು.
ಮನುಷ್ಯ ಆರ್ಥಿಕ ಸ್ವಾವಲಂಬನೆಗೆ ಉದ್ಯೋಗಗಳು ಅವಶ್ಯಕ. ಇಂತಹ ಸಂದರ್ಭದಲ್ಲಿ ಮಹಿಳೆಯರು ಬಿಡುವಿನ ಸಂದರ್ಭದಲ್ಲಿ ವೃತ್ತಿ ಕೌಶಲ್ಯ ತರಬೇತಿ ಪಡೆದು ಆರ್ಥಿಕ ಸ್ವಾವಲಂಬನೆ ಮಾಡುವ ಉದ್ದೇಶದಿಂದ ಜಿಲ್ಲಾ ವಯಸ್ಕರ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಎಂಬ್ರಾಯಿಡಿಂಗ್, ಕ್ಯಾಂಡಲ್ ತಯಾರಿಕೆ, ಹೊಲಿಗೆ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಸಾಕ್ಷರತಾ ಸಮಿತಿ ಅಧಿಕಾರಿ ನರಸಿಂಹಯ್ಯ ತಿಳಿಸಿದರಲ್ಲದೆ, ಹಾರನಹಳ್ಳಿಯಲ್ಲಿ ಮೂರು ತಿಂಗಳು ಕಾಲ ತರಬೇತಿ ನೀಡಲಿದ್ದು ಗ್ರಾಮದ ಆಸಕ್ತ ಮಹಿಳೆಯರು ನೋಂದಣಿ ಮಾಡಿಕೊಳ್ಳಲು ಸೂಚಿಸಿದರು.ತಾ.ಪಂ. ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಾರನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಸದಸ್ಯ ಕೃಷ್ಣಪ್ಪ, ಜೆ.ಡಿ. ಪರಮೇಶ್, ರಾಜಮ್ಮ, ತಮ್ಮಣ್ಣಗೌಡ ಇನ್ನೂ ಮೊದಲಾದವರು ಇದ್ದರು.