'ಕಾರ್ಯಕ್ರಮ ಆಧಾರದ ಮೇಲೆ ಒಂದಾದರೆ ತೃತೀಯ ರಂಗ ಅಧಿಕಾರಕ್ಕೆ'
ಹಾಸನ: ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಮುಖಂಡರು ತಮ್ಮ ಸಂಕುಚಿತ ಮನೋಭಾವ ಬಿಟ್ಟು ಕಾರ್ಯಕ್ರಮಗಳ ಆಧಾರದ ಮೇಲೆ ಒಗ್ಗಟ್ಟು ಪ್ರದರ್ಶಿಸಿದರೆ ಭವಿಷ್ಯದಲ್ಲಿ ತೃತೀಯ ಶಕ್ತಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಹಾಗೂ ಕೇಂದ್ರದಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ ಕಾಂಗ್ರೆಸ್ - ಬಿಜೆಪಿ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನವಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರು ಒಗ್ಗಟ್ಟನ್ನು ಮೆರೆದು ಜನರಲ್ಲಿ ವಿಶ್ವಾಸ ಮೂಡಿಸಿ ಲೋಕಸಭೆ ಚುನಾವಣೆ ಎದುರಿಸಿದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಕಷ್ಟವಾಗದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳ ಮುಖಂಡರಲ್ಲಿ ಅಂಥ ಮನಸ್ಸು ಕಾಣುತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿಷಾದಿಸಿದರು.
ಗುಜರಾತ್ ನಂ 1: ದೇಶ ಮತ್ತು ಜನತೆಯ ಹಿತದೃಷ್ಟಿಯಿಂದ ತೃತೀಯ ರಂಗದಲ್ಲಿರುವ ನಾಯಕರು ತಮ್ಮಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಗುಜರಾತ್ನಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ. ಪೌಷ್ಠಿಕಾಂಶ ಕೊರತೆಯಿಂದ ಮೃತಪಟ್ಟವರ ಸಂಖ್ಯೆಯತ್ತ ಗಮನಹರಿಸಿದರೆ ಗುಜರಾತ್ ನಂ 1 ಸ್ಥಾನದಲ್ಲಿದೆ. ಇಷ್ಟು ವರ್ಷ ಗುಜರಾತ್ ಆಳಿದ ಮೋದಿ ಕೊಡುಗೆ ಇದು. ಇದನ್ನು ಯುವಕರು, ಜನತೆ ಗಮನಿಸದಿದ್ದರೆ ದೇಶಕ್ಕೆ ಗಂಡಾಂತರ ಎರಗುವುದನ್ನು ತಪ್ಪಿಸಲಿಕ್ಕೆ ಆಗದು.
ಮೋದಿ ಕರ್ನಾಟಕಕ್ಕೆ ಬರುವುದರಿಂದ ಏನೇನು ಆಗುವುದಿಲ್ಲ. ಮೋದಿ ಬಂದು ಹೋಗುತ್ತಾರೆ. ನಂತರ ತಿರುಗಿ ನೋಡುವುದಿಲ್ಲ. ಜಮ್ಮು ಕಾಶ್ಮೀರನಲ್ಲಿ ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಮರು ಸ್ಥಾಪನೆ ಮಾಡಿದ್ದು, ಭಾರತ- ಚೀನಾ ನಡುವಿನ ನದಿ ನೀರಿನ ವಿವಾದ ಬಗೆಹರಿಸಿದ್ದು, ಕರ್ನಾಟಕದಲ್ಲಿ ನೀರಾವರಿ ಯೋಜನೆಗಳಿಗೆ 9 ಸಾವಿರ ಕೋಟಿ ರು. ಬಿಡುಗಡೆ ಮಾಡಿದ್ದು ದೇವೇಗೌಡರು. ಇದಕ್ಕೆ ಹೇಳಿಕೊಳ್ಳುವಂಥ ಪ್ರಚಾರ ಸಿಗಲಿಲ್ಲ. ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಜನತೆ ಉತ್ತಮರನ್ನು ಆಯ್ಕೆ ಮಾಡಿ ಸ್ವಾಭಿಮಾನ ಮೆರೆಯಬೇಕಾಗಿದೆ ಎಂದು ನುಡಿದರು.
ಮಾಧ್ಯಮಗಳಲ್ಲಿ ಕಲ್ಲಿದ್ದಲು, 2 ಜಿ. ಸ್ಪೆಕ್ಟಂ ಮತ್ತಿತರ ಭ್ರಷ್ಟಾಚಾರಗಳ ಬಗ್ಗೆ ಗ್ರೂಪ್ ಚರ್ಚೆ ನಡೆಸಲಾಗುತ್ತದೆ. ಆದರೆ ಮಾಧ್ಯಮಗಳೇ ಮಾಡಿದ ಸಮೀಕ್ಷೆಯಲ್ಲಿ ಬರುವಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 12 ಮತ್ತು ಜೆಡಿಎಸ್ಗೆ 3 ಸ್ಥಾನಗಳನ್ನು ನೀಡಲಾಗುತ್ತದೆ. ಹೀಗಾದರೆ ಭ್ರಷ್ಟಾಚಾರ ನಿರ್ಮೂಲನೆ ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.