ದೀಪಾವಳಿ ಹಬ್ಬಕ್ಕೆ ಗಣ್ಯರ ಶುಭಾಶಯ
ಹಾಸನ: ದೀಪಾವಳಿ ಹಬ್ಬ ಎಲ್ಲರ ಬಾಳಿನಲ್ಲಿ ಬೆಳಕನ್ನು ತರಲಿ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಇತರರು ಶುಭ ಕೋರಿದ್ದಾರೆ.
ನರ್ಮ್ ಯೋಜನೆಯಡಿ ರಾಜ್ಯಕ್ಕೆ 2 ಸಾವಿರ ಬಸ್
ಹಾಸನ: ನರ್ಮ್ ಯೋಜನೆಯಡಿ ರಾಜ್ಯಕ್ಕೆ 2 ಸಾವಿರ ಹೊಸ ಬಸ್ಗಳು ಲಭ್ಯವಾಗಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರ್ಮ್ ಯೋಜನೆಯಡಿಯಲ್ಲಿ ನೂತನ ಬಸ್ಗಳು ಬರಲಿದ್ದು, ಅವುಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಳಸಲಾಗುವುದು. ಜೊತೆಗೆ ಬೆಂಗಳೂರಿನಲ್ಲಿ ಮಿನಿಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಾಸನ ವಿಭಾಗಕ್ಕೂ ಹೊಸ ಬಸ್ಗಳನ್ನು ನೀಡುವುದಾಗಿ ಹೇಳಿದರು.
ಸಿಎಂ ಜೊತೆ ಚರ್ಚೆ: ಆಂಧ್ರದ ಮೆಹಬೂಬನಗರದಲ್ಲಿ ನಡೆದ ಬಸ್ ದುರುಂತಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮೃತ ಕುಟುಂಬಗಳಿಗೆ ಈಗಾಗಲೇ ಜಬ್ಬಾರ್ ಬಸ್ನವರು ತಲಾ ಲಕ್ಷ ರು.ಗಳ ಪರಿಹಾರ ನೀಡಿದ್ದಾರೆ. ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬಸ್ ದುರಂತದಲ್ಲಿ ರಾಜ್ಯದ 24 ಪ್ರಯಾಣಿಕರು ಸಾವನ್ನಪ್ಪಿದ್ದು, ಈಗಾಗಲೇ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಸತ್ತವರ ಬೈಕಿ 9 ಮಂದಿಯ ಕುಟುಂಬದವರು ಇನ್ನೂ ಬಂದಿಲ್ಲ ಎಂದು ಹೇಳಿದರು. ವೇಗ ನಿಯಂತ್ರಕ ಕಡ್ಡಾಯ: ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯವಾಗಿದ್ದು, ಅದು ಕಟ್ಟು ನಿಟ್ಟಾಗಿ ಅನುಷ್ಠಾನಗೊಂಡಿಲ್ಲ. ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ವೇಗ ನಿಯಂತ್ರಕ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನೂತನ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲಾಗುತ್ತಿದೆ. ಆದರೆ ಹಳೆಯ ವಾಹನಗಳಿಗೂ ವೇಗ ನಿಯಂತ್ರಕ ಸಾಧನ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಇರುವುದು ಕಾಂಗ್ರೆಸ್ ಅಲೆ ಎಂದ ಅವರು, ರಾಜ್ಯದಲ್ಲಿ ಮೋದಿ ಪ್ರಚಾರ ರ್ಯಾಲಿ ನಡೆಸುವುದರಿಂದ ನಮಗೆ ಆತಂಕವಿಲ್ಲ. ನಾವು ಜನಪರ ಕೆಲಸದಲ್ಲಿ ತಲ್ಲೀನರಾಗಿದ್ದು, ಅದನ್ನು ಮತದಾರರು ತೀರ್ಮಾನಿಸಲಿದ್ದಾರೆ ಎಂದರು. ಸಾಮಾಜಿಕ ಪರಿವರ್ತನಾ ಟ್ರಸ್ಟ್ನ ಎಸ್.ಆರ್.ಹಿರೇಮಠ್ ಅವರು ಸಂತೋಷ್ಲಾಡ್ ವಿರುದ್ಧ ನೀಡಿರುವ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿದ್ದು, ಲಾಡ್ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಹೇಳಿದರು.