ಶಾದಿ ಭಾಗ್ಯ ಯೋಜನೆ ಖಂಡಿಸಿ ಬಜರಂಗದಳ ಪ್ರತಿಭಟನೆ
ಸಕಲೇಶಪುರ: ಶಾದಿ ಭಾಗ್ಯ ಯೋಜನೆ ಖಂಡಿಸಿ ತಾ. ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹಳೇ ಬಸ್ ನಿಲ್ದಾಣ ಬಳಿ ನಡೆದ ಬಹಿರಂಗಸಭೆಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಸಂತೋಷ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸಲ್ಮಾನರನ್ನು ಓಲೈಸುವ ಭರದಲ್ಲಿ ಬಡ ಹಿಂದೂಗಳ ಮೇಲೆ ಕಾಳಜಿಯಿಲ್ಲದಂತಾಗಿದೆ. ಎಲ್ಲಾ ವರ್ಗದ ಓಟುಗಳಿಂದ ಕಾಂಗ್ರೆಸ್ ಗೆದ್ದಿದ್ದರೂ ಕೇವಲ ಅಲ್ಪ ಸಂಖ್ಯಾತರ ಪರ ವಹಿಸುತ್ತ ಸಮಾಜದಲ್ಲಿ ಒಡಕು ಹುಟ್ಟಹಾಕುತ್ತಿದೆ ಎಂದು ಟೀಕಿಸಿದರು.
ಶಾದಿ ಭಾಗ್ಯ ಯೋಜನೆ ಅನುಷ್ಠಾನಗೊಳಿಸುವುದಾದರೆ ಎಲ್ಲಾ ವರ್ಗಗಳಿಗೂ ಈ ಯೋಜನೆಯ ಭಾಗ್ಯ ಸಿಗಬೇಕು ಇಲ್ಲದಿದ್ದರೆ ತಕ್ಷಣ ಈ ಯೋಜನೆ ಹಿಂತೆಗೆದುಕೊಳ್ಳಬೇಕು. ಒಂದು ವೇಳೆ ಈ ಯೋಜನೆಯನ್ನು ಕೇವಲ ಮುಸಲ್ಮಾನರಿಗೆ ಮಾತ್ರ ಅನುಷ್ಠಾನಗೊಳಿಸಿದರೆ ಇದರ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಅವರು ಹೇಳಿದರು.
ಪಟ್ಟಣದ ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ವಿಎಚ್ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಶ್ರೀ ವಿದ್ಯಾರವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಮಟ್ಟದ ಕಾರ್ಯಕರ್ತರ ಬೈಠಕ್ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ನಡೆಯಿತು.
ವಿಎಚ್ಪಿ ನಗರ ಅಧ್ಯಕ್ಷ ದುಷ್ಯಂತ್ ಮಾತನಾಡಿ, ಕಳೆದ ಬಾರಿ ದತ್ತ ಪೀಠಕ್ಕೆ ಸುಮಾರು 2 ಸಾವಿರ ಕಾರ್ಯಕರ್ತರು ಸಕಲೇಶಪುರ ತಾಲೂಕಿನಿಂದ ತೆರಳಿದ್ದು ಈ ಬಾರಿ 3 ಸಾವಿರ ಕಾರ್ಯಕರ್ತರೊಂದಿಗೆ ದತ್ತಪೀಠಕ್ಕೆ ತೆರಳಲಾಗುವುದೆಂದು ಅವರು ಹೇಳಿದರು.
ಬಜರಂಗದಳ ಜಿಲ್ಲಾ ಸಂಚಾಲಕ ವಿಜಯಕುಮಾರ್, ವಿಎಚ್ಪಿ ನಗರ ಅಧ್ಯಕ್ಷ ದುಷ್ಯಂತ್, ಬಜರಂಗದಳ ತಾಲೂಕು ಸಹ ಸಂಚಾಲಕ ಸಿದ್ದಪ್ಪ, ಸಂಘಟನೆಯ ಪ್ರಮುಖರಾದ ಕುಶಾಲನಗರ ರಾಜಣ್ಣ, ಕಾರ್ತೀಕ್, ಸಂತೋಷ್, ಸತೀಶ್, ಅಶೋಕ ಹೊಸಕೋಟೆ, ಸಂದೇಶ್ ಮುಂತಾದವರು ಇದ್ದರು.