ಸರ್ಕಾರದ ಅನುದಾನ ಸದ್ಬಳಕೆ ಆಗಲಿ: ಸುಭಾಷ್ ಆದಿ
ಕ.ಪ್ರ.ವಾರ್ತೆ ಹಾಸನ ನ. 1
ಕುಡಿಯುವ ನೀರು, ವಿದ್ಯುತ್ ಸೌಕರ್ಯ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಸ್ಥಳೀಯ ಆಡಳಿತ ಗಮನಹರಿಸುವಂತೆ ಉಪ ಲೋಕಾಯುಕ್ತ ಸುಭಾಷ್ ಆದಿ ಸೂಚಿಸಿದ್ದಾರೆ. ಗೊರೂರಿಗೆ ಭೇಟಿ ನೀಡಿ ಲಕ್ಷೀನರಸಿಂಹಸ್ವಾಮಿ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದು, ಅದು ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಬೇಕು ಎಂದರು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದ ಅವರು, ಗೊರೂರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹಣ ಲಭ್ಯವಿದ್ದು, ಈಗಾಗಲೆ ಗುರುತಿಸಿರುವ ಸ್ಥಳದಲ್ಲಿ ಭವನ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು ಶೀತ ಪೀಡಿತ ಪ್ರದೇಶವನ್ನು ತಾಂತ್ರಿಕವಾಗಿ ಪರಿಶೀಲಿಸಿ ಸ್ಥಳಾಂತರಿಸಲು ನಿರ್ದೇಶನ ನೀಡಿದರು. ಯಾವುದೇ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದಾರೆ ಅಂತಹವುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು. ಜಿಲ್ಲಾಧಿಕಾರಿಯವರು ಲೋಕಾಯುಕ್ತರ ನಿರ್ದೇಶನ ಪಾಲಿಸುವುದಾಗಿ ತಿಳಿಸಿದರು. ಅರಕಲಗೂಡಿನ 75 ವರ್ಷದ ವೃದ್ಧೆಯೊಬ್ಬರು ಸಂಬಂಧಿಕರು ತೊಂದರೆ ನೀಡುತ್ತಿದ್ದು ತನಗೆ ರಕ್ಷಣೆ ನೀಡುವಂತೆ ಉಪ ಲೋಕಾಯುಕ್ತರಲ್ಲಿ ಮನವಿ ಮಾಡಿದರು. ಜಿಲ್ಲಾ ಎಸ್ಪಿಗೆ ರಕ್ಷಣೆ ನೀಡುವಂತೆ ಸೂಚನೆ ನೀಡಿದರು. ಲೋಕಾಯುಕ್ತಕ್ಕೆ ಬರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಳೀಯ ಆಡಳಿತ ಕೆಲಸ ಮಾಡಬೇಕೆಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ತಹಸೀಲ್ದಾರ್ ಮಂಜುನಾಥ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಇದ್ದರು.