2 ಹಂತದಲ್ಲಿ ಮಕ್ಕಳ ಸಮೀಕ್ಷೆ: ಬಿಇಓ
ಕ.ಪ್ರ. ವಾರ್ತೆ ಅರಸೀಕೆರೆ ನ. 3
ತಾಲೂಕಿನಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯವನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದ್ದು, ತಾಲೂಕು ಆಡಳಿತ ಮತ್ತು ಇನ್ನಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಕೇಶವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದ ವರ್ಷ ಶಾಲೆ ಬಿಟ್ಟ ಮಕ್ಕಳ ಗಣತಿ ಕಾರ್ಯ ನಡೆಸಿದ್ದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 48 ಮಕ್ಕಳನ್ನು ಮಾತ್ರ ಗುರುತಿಸಲಾಗಿತ್ತು.
ಇಂತಹ ಸಮೀಕ್ಷೆಗಳು ಪರಿಪೂರ್ಣವಾಗಲೂ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ವರ್ಷ ಸರ್ಕಾರ 6 ರಿಂದ 16 ವರ್ಷದ ಮಕ್ಕಳ ಸಮೀಕ್ಷೆ ನಡೆಸಲು ಕಾರ್ಯಕ್ರಮ ರೂಪಿಸಿದೆ ಎಂದರು.
ತಾಲೂಕಿನಲ್ಲಿ ಪ್ರಸ್ತುತ 1 ರಿಂದ 7 ತರಗತಿವರೆಗೂ ಸುಮಾರು 30 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕುಟುಂಬದಲ್ಲಿನ ಅನೇಕ ಸಮಸ್ಯೆಗಳ ಕಾರಣ ಮಕ್ಕಳಿಗೆ ವಿದ್ಯಾಬ್ಯಾಸ ನೀಡದೆ ಪೋಷಕರು ಮಕ್ಕಳನ್ನು ದುಡಿಮೆಗೆ ಕಳುಹಿಸುತ್ತಿರುವುದು. ಅಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಪದ್ದತಿಯುಳ್ಳ ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸದೆ ಇರುವುದು ಕಾನೂನು ರೀತಿಯ ಅಪರಾಧವಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನವನ್ನು ನಾನಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ನೇರವಿನೊಂದಿಗೆ ನಾವುಗಳು ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಬಿ.ಆರ್.ಸಿ. ಪಂಚಾಕ್ಷರಿ ಮಾತನಾಡಿ, ಪಟ್ಟಣ ಪ್ರದೇಶವು ಸೇರಿದಂತೆ ತಾಲೂಕಿನ ಗ್ರಾಮೀಣಾ ಪ್ರದೇಶಗಳಲ್ಲಿ ನ.6 ಮತ್ತು 7 ರಂದು ಎರಡು ದಿನಗಳು ಪ್ರತಿ ಶಾಲೆಗಳಲ್ಲಿ ಸತತ ಗೈರು ಹಾಜರಾದ ಮಕ್ಕಳನ್ನು ಗುರುತಿಸುವುದು ಮೊದಲ ಹಂತವಾಗಿದೆ.
ಎರಡನೇ ಹಂತವಾಗಿ ನ.13 ರಿಂದ 17 ರವರೆಗೆ 5 ದಿನಗಳ ಕಾಲದಲ್ಲಿ ಪ್ರತಿಯೊಂದು ಮನೆಗಳಿಗೆ ಅಧಿಕಾರಿಗಳ ತಂಡವು ಬೇಟಿ ನೀಡಿ ಮೂಲಕ ಶಾಲೆ ಬಿಟ್ಟಿರುವ ಮಕ್ಕಳ ಗಣತಿ ಕಾರ್ಯ ನಡೆಸುತ್ತದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಕಾಶ್ಮೂರ್ತಿ, ನಗರ ಠಾಣೆ ಆರಕ್ಷಕ ನಿರೀಕ್ಷಕ ನಂದಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿದ್ದರು.